ಬಂಟ್ವಾಳ,ನ.19(DaijiworldNews/TA):ಬಂಟ್ವಾಳ ಹಾಗೂ ಉಳ್ಳಾಲ ತಾಲೂಕುಗಳ ಒಟ್ಟು 57 ಗ್ರಾ.ಪಂ.ಗಳ ಘನ ತ್ಯಾಜ್ಯಗಳನ್ನು ನಿರ್ವಹಿಸುವ ದೃಷ್ಟಿಯಿಂದ ನರಿಕೊಂಬು ಗ್ರಾ.ಪಂ.ವ್ಯಾಪ್ತಿಯ ಶಂಭೂರಿನಲ್ಲಿ ಸುಮಾರು 1.95 ಕೋ.ರೂ.ವೆಚ್ಚದಲ್ಲಿ ಅನುಷ್ಠಾನಗೊಂಡ ಸಮಗ್ರ ತ್ಯಾಜ್ಯ ನಿರ್ವಹಣಾ ಘಟಕ(ಎಂಆರ್ಎಫ್)ದ ಕಾಮಗಾರಿ ಪೂರ್ಣಗೊಂಡಿದ್ದು, ಘಟಕವು ನಾಳೆಯಿಂದ ಪ್ರಾಯೋಗಿಕವಾಗಿ ಕಾರ್ಯಾರಂಭಗೊಳ್ಳಲಿದೆ.
ಶಂಭೂರಿನ ಮುಂದೆಜೋರ ಪ್ರದೇಶದಲ್ಲಿ ಸ.ನಂ. 24/1ಜಿರಲ್ಲಿ ಘಟಕಕ್ಕೆ 1 ಎಕ್ರೆ ನಿವೇಶನವಿದ್ದು, ಸುಮಾರು7 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಘಟಕ ಅನುಷ್ಠಾನಗೊಂಡಿದೆ. ಘಟಕವು ದಿನನಿತ್ಯ 7 ಟನ್ ಒಣ ತ್ಯಾಜ್ಯವನ್ನು ವಿಂಗಡಿಸಿ ನಿರ್ವಹಣೆಗೊಳಿಸುವ ಸಾಮರ್ಥ್ಯವನ್ನು ಹೊಂದಿದ್ದು, ಬಂಟ್ವಾಳ ತಾಲೂಕಿನ 40 ಹಾಗೂ ಉಳ್ಳಾಲ ತಾಲೂಕಿನ 17 ಗ್ರಾ.ಪಂ.ಗಳು ಈ ಘಟಕದ ವ್ಯಾಪ್ತಿಗೆ ಬರಲಿದ್ದು, ಒಟ್ಟು 57 ಗ್ರಾ.ಪಂ.ಗಳ 99,520 ಮನೆಗಳು ಹಾಗೂ ವಾಣಿಜ್ಯ ಮಳಿಗೆಗಳ ಒಣ ತ್ಯಾಜ್ಯವನ್ನು ನಿರ್ವಹಣೆ ಮಾಡಲಾಗುತ್ತದೆ.
ಕಳೆದ ಹಲವು ತಿಂಗಳ ಹಿಂದೆಯೇ ಕಾರ್ಯಾರಂಭಗೊಳ್ಳಬೇಕಾದ ಘಟಕದ ಕಾಮಗಾರಿ ಹಲವು ಕಾರಣಕ್ಕೆ ವಿಳಂಬವಾಗಿದ್ದು, ಪ್ರಸ್ತುತ ಯಂತ್ರೋಪಕರಣ ಜೋಡಣೆಯ ಕಾರ್ಯ ಸೇರಿದಂತೆ ಬಹುತೇಕ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡಿದೆ. ಉಳಿದಂತೆ ಘಟಕದ ಮೇಲ್ಛಾವಣಿ(ಟ್ರಸ್), ಇನ್ನಿತರ ಸಿವಿಲ್ ಕೆಲಸಗಳು ಪೂರ್ಣಗೊಂಡಿದೆ. ಶಂಭೂರಿನಿಂದ ಈ ಘಟಕಕ್ಕೆ ತೆರಳಲು ಉತ್ತಮವಾದ ಕಾಂಕ್ರೀಟ್ ಸಂಪರ್ಕ ರಸ್ತೆಯನ್ನು ನಿರ್ಮಿಸಲಾಗಿದೆ. ಮಂಗಳೂರಿನ ತೆಂಕಎಡಪದವು ಗ್ರಾಮದಲ್ಲಿ ದ.ಕ.ಜಿಲ್ಲೆಯ ಮೊದಲ ಎಂಆರ್ಎಫ್ ಘಟಕ ಅನುಷ್ಠಾನಗೊಂಡಿದ್ದು, 2 ನೇ ಹಂತದಲ್ಲಿ ಬೆಳ್ತಂಗಡಿಯ ಉಜಿರೆ, ಪುತ್ತೂರಿನ ಕೆದಂಬಾಡಿ ಹಾಗೂ ಬಂಟ್ವಾಳದ ಶಂಭೂರಿಗೆ ಎಂಆರ್ಎಫ್ ಘಟಕಗಳು ಮಂಜೂರಾಗಿದ್ದವು.
ಗ್ರಾ.ಪಂ.ಗಳಿಗಿಲ್ಲ ಆರ್ಥಿಕ ಹೊರೆ: ಈಗಾಗಲೇ ಪ್ರತಿ ಗ್ರಾ.ಪಂ.ಗಳಲ್ಲಿ ಸ್ವಚ್ಛವಾಹಿನಿ ವಾಹನಗಳು ತ್ಯಾಜ್ಯವನ್ನು ಸಂಗ್ರಹಿಸುವ ಕಾರ್ಯಾ ಮಾಡುತ್ತಿದ್ದು, ಅವುಗಳನ್ನು ಪಂಚಾಯತ್ನ ಸ್ವಚ್ಛ ಸಂಕೀರ್ಣ ತ್ಯಾಜ್ಯ ಘಟಕದಲ್ಲಿ ವಿಂಗಡನೆ ಮಾಡಿ ಚೀಲದಲ್ಲಿ ಶೇಖರಿಸಿಡಲಾಗುತ್ತಿದೆ. ಮುಂದೆ ಅವುಗಳೆಲ್ಲವನ್ನೂ ಎರಡೂ ತಾಲೂಕುಗಳಿಗೆ ಹೊಂದಾಣಿಕೆ ಮಾಡಿ ರೂಟ್ ಮ್ಯಾಪ್ ಸಿದ್ಧಪಡಿಸಿ ಎಂಆರ್ಎಫ್ ಘಟಕಕ್ಕೆ ಸಾಗಿಸುವ ಕಾರ್ಯ ನಡೆಯಲಿದೆ. ಬಳಿಕ ಎಂಆರ್ಎಫ್ ಘಟಕದಲ್ಲಿ ಯಂತ್ರಗಳ ಮೂಲಕ ಕಣವಾಗಿ ಪರಿವರ್ತಿಸಿ ಅದನ್ನು ವಿವಿಧ ವಿಭಾಗಗಳಲ್ಲಿ ಪ್ರತ್ಯೇಕಿಸಿ ಮರು ಉತ್ಪಾದನೆ, ಸಿಮೆಂಟ್ ಉತ್ಪಾದನ ಘಟಕಗಳಿಗೆ ಇಂಧನವಾಗಿ ಮಾರಾಟ ಮಾಡಲಾಗುತ್ತದೆ. ಘಟಕದ ನಿರ್ವಹಣೆಗಾಗಿ ತಾಂತ್ರಿಕ ಮತ್ತು ಆಡಳಿತ ಸಮಿತಿ ರಚನೆಗೊಂಡಿರುತ್ತದೆ.
ಸಾಮಾನ್ಯವಾಗಿ ಇಂತಹ ಘಟಕಗಳು ಗ್ರಾ.ಪಂ.ಹಣ ಪಾವತಿಸಿ ಒಣ ತ್ಯಾಜ್ಯ ನೀಡುವುದು ಅಥವಾ ಘಟಕದ ನಿರ್ವಹಣ ಸಂಸ್ಥೆಯೇ ಹಣ ಪಾವತಿಸಿ ತ್ಯಾಜ್ಯವನ್ನು ಸಂಗ್ರಹ ಮಾಡುವ ಮೂಲಕ ನಡೆಯುತ್ತದೆ. ಆದರೆ ದ.ಕ.ಜಿ.ಪಂ. ರಾಜ್ಯದಲ್ಲೇ ಮೊದಲ ಬಾರಿಗೆ ಶುಲ್ಕ ರಹಿತ ಮಾದರಿ(ಝೀರೊ ರೂಪೀಸ್ ಮಾಡೆಲ್)ಯನ್ನು ಪರಿಚಯಿಸಿದ್ದು, ಇಲ್ಲಿ ಯಾರು ಕೂಡ ಪರಸ್ಪರ ಯಾರಿಗೂ ಮೊತ್ತ ಪಾವತಿಸುವ ವ್ಯವಸ್ಥೆಯಿಲ್ಲ. ಇದರಿಂದ ಗ್ರಾ.ಪಂ.ಗಳು ಆರ್ಥಿಕ ಹೊರೆಯಾಗದಂತೆ ಒಡಂಬಡಿಕೆಯ ರೀತಿ ಒಣ ತ್ಯಾಜ್ಯವನ್ನು ನೀಡಬಹುದಾಗಿದೆ.
ಅನುದಾನ ವಿಂಗಡಣೆ :ದ.ಕ.ಜಿ.ಪಂ.ನ ಸ್ವಚ್ಛ ಭಾರತ್ ಮಿಷನ್(ಗ್ರಾಮೀಣ) ವತಿಯಿಂದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಈ ಎಂಆರ್ಎಫ್ ಘಟಕವನ್ನು ಅನುಷ್ಠಾನಗೊಳಿಸಿದ್ದು, ಇದರ ಒಟ್ಟು ಅನುಷ್ಠಾನ ವೆಚ್ಚ 1.95 ಕೋ.ರೂ. ಆಗಿರುತ್ತದೆ. ಅದರಲ್ಲಿ 1.46 ಕೋ.ರೂ.ಸಿವಿಲ್ ಹಾಗೂ 48.50 ಲಕ್ಷ ರೂ. ಯಂತ್ರೋಪಕರಣಗಳಿಗೆ ಬಳಕೆಯಾಗಲಿದೆ. 98 ಲಕ್ಷ ರೂ.ಗಳನ್ನು ಗ್ರಾ.ಪಂ.ಗಳಿಂದ,32 ಲಕ್ಷ ರೂ. ಸ್ವಚ್ಛ ಭಾರತ್ ಮಿಷನ್(ಗ್ರಾಮೀಣ),35 ಲಕ್ಷ ರೂ. ತಾ.ಪಂ.ಅನುದಾನ ಹಾಗೂ 20 ಲಕ್ಷ ರೂ.ಜಿ.ಪಂ.ಅನುದಾನವನ್ನು ಬಳಸಿಕೊಳ್ಳಲಾಗಿದೆ.
ಪ್ರತಿ ಗ್ರಾ.ಪಂ.ಗಳಿಂದ ತ್ಯಾಜ್ಯ ಸಂಗ್ರಹಕ್ಕಾಗಿ ವಾಹನದ ಆವಶ್ಯಕತೆ ಇದ್ದು, ಅದಕ್ಕಾಗಿ ಎಂಸಿಎಫ್ನಿಂದ24 ಲಕ್ಷ ರೂ.ಗಳ ಸಿಎಸ್ಆರ್ ಅನುದಾನ ಬಳಸಿಕೊಳ್ಳಲಾಗುತ್ತಿದೆ.
ನಾಳೆಯಿಂದ ಆರಂಭ: ಇ.ಒ.ಸಚಿನ್
ಎಂಆರ್ಎಫ್ ಘಟಕದ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಯಂತ್ರೋಪಕರಣಗಳ ಅನುಷ್ಠಾನ ಕಾರ್ಯ ಪೂರ್ಣಗೊಂಡಿದೆ, ಹಾಗಾಗಿ ನಾಳೆಯಿಂದ ಘಟಕದಲ್ಲಿ ಪ್ರಾಯೋಗಿಕವಾಗಿ ಕೆಲಸ ಆರಂಭವಾಗಲಿದೆ. ಸುಮಾರು 15 ಸಿಬ್ಬಂದಿಗಳು ಆರಂಭಿಕ ಹಂತದಲ್ಲಿ ಕಾಮಗಾರಿಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಬಹತೇಕ ಕೆಲಸ ಕಾರ್ಯಗಳು ಯಂತ್ರೋಪಕರಣಗಳ ಮೂಲಕ ನಡೆಯುದರಿಂದ ಸಿಬ್ಬಂದಿಗಳು ಹೊಂದಿಕೊಂಡು ಪರಿಪಕ್ವವಾದ ತಿಂಗಳೊಳಗಾಗಿ ಅಧಿಕೃತವಾಗಿ ಘಟಕದ ಉದ್ಘಾಟನೆ ನಡೆಯಲಿದೆ ಎಂದು ತಾ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ಸಚಿನ್ಕುಮಾರ್
ತಿಳಿಸಿದ್ದಾರೆ.
ಸಂತಸದ ವಿಚಾರ: ಸಂತೋಷ್ ಕುಮಾರ್
ಆರಂಭದಲ್ಲಿ ಘಟಕದ ನಿರ್ಮಾಣಕ್ಕೆ ಹಲವಾರು ವಿರೋಧಗಳಿದ್ದರು ಕೂಡ ನಂತರದ ದಿನಗಳಲ್ಲಿ ಗ್ರಾಮಸ್ಥರ ಹಾಗೂ ಗ್ರಾಮ ಪಂಚಾಯತ್ ಸದಸ್ಯರ ಸಹಕಾರದಿಂದ ಅಂತಿಮವಾಗಿ ಉದ್ಘಾಟನೆಗೆ ಸಿದ್ದವಾಗಿದೆ. ಗ್ರಾಮದ ಸುಮಾರು 15 ಜನರಿಗೆ ಘಟಕದಲ್ಲಿ ಕೆಲಸ ದೊರಕಿದೆ. ಪ್ರಸ್ತುತ ದಿನಗಳಲ್ಲಿ ಇದೊಂದು ಪ್ರಮುಖವಾದ ಘಟಕವಾಗಿದ್ದು, ಇದು ಸಂತಸದ ಸಂಗತಿಯಾಗಿದೆ ಎಂದು ನರಿಕೊಂಬು ಗ್ರಾ.ಪಂ.ಅಧ್ಯಕ್ಷ ಸಂತೋಷ್ ಕುಮಾರ್ ತಿಳಿಸಿದ್ದಾರೆ.