ಬಂಟ್ವಾಳ, ನ.20(DaijiworldNews/AA): ಇಲ್ಲಿನ ಬೆಂಜನಪದವು ಕೆನರಾ ಇಂಜಿನಿಯರಿಂಗ್ ಕಾಲೇಜು ನೂತನ ಇನ್ಕ್ಯುಬೇಶನ್ ಸೆಂಟರ್ ಹಾಗೂ ಸ್ಟಾರ್ಟ್ ಅಪ್ ಇಕೋಸಿಸ್ಟಮ್ ವೃದ್ಧಿಗಾಗಿ ಸೆಕ್ಷನ್ ಇನ್ಫಿನಿಟಿ 8 ಫೌಂಡೇಶನ್ ಪರಸ್ಪರ ಒಪ್ಪಂದ ಮಾಡಿಕೊಂಡಿವೆ.
ಕೆನರಾ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಅಮ್ಮೆಂಬಳ ಸುಬ್ಬರಾವ್ ಪೈ ಅವರ ಜನ್ಮದಿನಾಚರಣೆಯ ಸುದಿನ ಅವರ ಉದ್ಯಮಶೀಲತೆಯ ಪರಂಪರೆಯನ್ನು ಮುಂದಿನ ಯುವ ಪೀಳಿಗೆಗಾಗಿ ಮುನ್ನಡೆಸುವ ಸಂಕಲ್ಪದೊಂದಿಗೆ ನ.19ರಂದು ಈ ಒಪ್ಪಂದ ಮಾಡಿಕೊಳ್ಳಲಾಗಿದೆ.
ಈ ಒಪ್ಪಂದದಂತೆ ಇನ್ಕ್ಯುಬೇಶನ್ ಸೆಂಟರ್ ಮೂಲಕ ಕಾಲೇಜಿನ ಬೋಧಕರು, ವಿದ್ಯಾರ್ಥಿಗಳ, ಸ್ಥಳೀಯ ಸಮುದಾಯದ ಸಬಲೀಕರಣ, ವಿನೂತನ ಸ್ಟಾರ್ಟಪ್ ಚಿಂತನೆಗಳನ್ನು ಅಭಿವೃದ್ಧಿ ಪಡಿಸಿ ಯಶಸ್ಸಿನ ಉತ್ಪನ್ನವಾಗಿಸುವ ಗುರಿ ಹೊಂದಲಾಗಿದೆ. ಸೆಕ್ಷನ್ ಇನ್ಫಿನಿಟಿ 8 ಫೌಂಡೇಶನ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳನ್ನು ಉದ್ಯಮಿಗಳನ್ನಾಗಿಸುವ, ಉದ್ಯೋಗದಾತರನ್ನಾಗಿಸುವ, ಸ್ಥಳೀಯ ಆರ್ಥಿಕತೆಯನ್ನು ಉತ್ತೇಜಿಸುವ ಯೋಜನೆ ಇದಾಗಿದೆ. ಹೊಸ ಸ್ಟಾರ್ಟಪ್ ಗಳಿಗೆ ಸರ್ಕಾರದ ಅನುದಾನ, ಸಿಎಸ್.ಆರ್ ನೆರವು ಸೇರಿದಂತೆ ಆರ್ಥಿಕ ಮೂಲಗಳನ್ನು ಸಂಚಯಿಸಿ ಅವುಗಳನ್ನು ಸ್ವಾವಲಂಬಿ, ಉತ್ಪಾದಕ ಮಾದರಿಯನ್ನಾಗಿಸುವ ಗುರಿ ಹೊಂದಲಾಗಿದೆ.
ಈ ದಶಕದಲ್ಲಿ ಯುವ ಇಂಜಿನಿಯರಿಂಗ್ ಪದವೀಧರರು ಬರೇ ತಾಂತ್ರಿಕ ಕೌಶಲ ಹೊಂದಿದ್ದರೆ ಸಾಲದು, ಸಮಾಜದ ಸವಾಲನ್ನೆದುರಿಸಿ ಉದ್ಯಮ ಶೀಲ ಮನೋಭಾವ ಹೊಂದಿರಬೇಕು. ಈ ಒಪ್ಪಂದವು ಪ್ರತಿಭಾನ್ವಿತರ ಸ್ಟಾರ್ಟಪ್ ಯಶಸ್ಸಿನ ಪಯಣದಲ್ಲಿ ವೇಗ ನೀಡಲಿದೆ ಎಂದು ಪ್ರಾಂಶುಪಾಲ ಡಾ. ನಾಗೇಶ್ ಹೆಚ್. ಆರ್. ಹೇಳಿದರು. ಈ ಒಪ್ಪಂದವು ವಿದ್ಯಾರ್ಥಿಗಳನ್ನು ನಾವೀನ್ಯತೆಯ ಜತೆಗೆ ಉದ್ಯಮ ಸ್ನೇಹಿ ಉದ್ಯಮಿಗಳನ್ನಾಗಿಸುವ ಕಾಲೇಜಿನ ಬದ್ಧತೆಗೆ ನಿದರ್ಶನವಾಗಿದೆ.
ಕೆನರಾ ಸಿಬಿಎಸ್ಸಿ ಆಡಳಿತ ಮಂಡಳಿಯ ಸಭಾಂಗಣದಲ್ಲಿ ಜರುಗಿದ ಈ ಸಮಾರಂಭದಲ್ಲಿ ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಕಾರ್ಯದರ್ಶಿ ಎಂ.ರಂಗನಾಥ ಭಟ್, ಜತೆ ಕಾರ್ಯದರ್ಶಿ ಟಿ. ಗೋಪಾಲಕೃಷ್ಣ ಶೆಣೈ, ಕೆನರಾ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ. ನಾಗೇಶ್ ಹೆಚ್. ಆರ್. ಸೆಕ್ಷನ್ ಇನ್ಫಿನಿಟಿ 8 ಫೌಂಡೇಶನ್ ನಿರ್ದೇಶಕ ವಿಶ್ವಾಸ್ ಉಚ್ಚಿಲ ಶಿಶಿರ್, ಸಿಎಫ್ ಒ ಪ್ರೇಕ್ಷಾ ತೇಜ್, ಕಾಲೇಜಿನ ಬೋಧಕರು ಮತ್ತು ಆಡಳಿತ ಪ್ರಮುಖರು ಉಪಸ್ಥಿತರಿದ್ದರು.