ಕಡಬ, ನ.20(DaijiworldNews/AA): ತಾಲೂಕಿನ ಕೌಕ್ರಾಡಿ ಗ್ರಾ.ಪಂ. ವ್ಯಾಪ್ತಿಯ ಕಾಪಿನ ಬಾಗಿಲು ಎಂಬಲ್ಲಿ ವೃದ್ಧ ದಂಪತಿಗಳ ಮನೆ ದ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ನಡೆಯನ್ನು ಖಂಡಿಸಿ ಇಂದು ಕಡಬ ತಹಶೀಲ್ದಾರ್ ಕಚೇರಿಯ ಮುಂದೆ ಪ್ರತಿಭಟನೆ ನಡೆಯಿತು.
'
ಸಾಮಾಜಿಕ ಹೋರಾಟಗಾರ, ನೀತಿ ತಂಡದ ರಾಜ್ಯಾಧ್ಯಕ್ಷ ಜಯಂತ್ ಟಿ., ನ್ಯಾಯವಾದಿ ಬಿ.ಎಂ.ಭಟ್, ಕೆ.ಆರ್.ಎಸ್. ಪಕ್ಷದ ವೇಣುಗೋಪಾಲ್ ಅವರು ನೇತೃತ್ವ ವಹಿಸಿದ್ದು, ತಹಶೀಲ್ದಾರ್ ಕಚೇರಿ ಪಕ್ಕದ ರಸ್ತೆ ಬದಿ ಅಧಿಕ ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ವೃದ್ದ ದಂಪತಿ ನಜ್ಜುಗುಜ್ಜುಗೊಂಡ ಪಾತ್ರೆ ಪರಿಕರಗಳ ಜೊತೆ ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಜೊತೆಗೆ ಸಮಾನ ಮನಸ್ಕರು ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಮನೆ ಕಳೆದುಕೊಂಡ ವೃದ್ದ ದಂಪತಿ ನಮಗೆ ಜೀವ ಬೇಡ ಎಂದು ನೆಲದಲ್ಲಿ ಒದ್ದಾಡುತ್ತಿರುವುದನ್ನು ಅಧಿಕಾರಿಗಳು ಮೂಕಪ್ರೇಕ್ಷಕರಾಗಿ ನೋಡುತ್ತಿರುವುದು ಕಂಡು ಬಂತು. ಪ್ರತಿಭಟನೆಗೆ ಅನುಮತಿ ಇಲ್ಲ ಎಂದು ಅಧಿಕಾರಿ ಹೇಳಿದ ಹಿನ್ನೆಲೆ ಪ್ರತಿಭಟನಾಕಾರರು ಆಕ್ರೋಶಗೊಂಡು ರಸ್ತೆ ಬಳಿ ಗುಂಪು ಸೇರಿದ್ದರು.
ಕಡಬ ಠಾಣಾ ಎಸ್.ಐ. ಅಭಿನಂದನ್ ಹಾಗೂ ನೆರೆಯ ಠಾಣೆಗಳ ಪೊಲೀಸರು ಸ್ಥಳದಲ್ಲಿ ಬಂದೋ ಬಸ್ತ್ ಏರ್ಪಡಿಸಿದ್ದಾರೆ. ಹೋರಾಟಗಾರರಾದ ಹಕೀಮ್ ಕೊಕ್ಕಡ, ಈಶ್ವರಿ, ಸಿಮಿ ಉಂಡಿಲ ಸೇರಿದಂತೆ ಹಲವಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.