ಉಡುಪಿ, ನ.20(DaijiworldNews/AA): ಜಿಲ್ಲೆಯಲ್ಲಿ ಸುರಿದ ಮುಂಗಾರು ಮಳೆಯಿಂದ ಉಂಟಾದ ಮೂಲಸೌಕರ್ಯಗಳ ಹಾನಿಯ ಪುನರ್ನಿರ್ಮಾಣ ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಿ ಎಂದು ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಜನವರಿಯಿಂದ ಈವರೆಗೆ ವಾಡಿಕೆಗಿಂತ ಹೆಚ್ಚು ಮಳೆ ಸುರಿದು ರಸ್ತೆ, ವಿದ್ಯುತ್ ಕಂಬ ಸೇರಿದಂತೆ ಮತ್ತಿತರ ಮೂಲಸೌಕರ್ಯಗಳ ಕಾಮಗಾರಿಗಳನ್ನು ಕೈಗೊಳ್ಳಲು ಈಗಾಗಲೇ ಅನುದಾನ ಬಿಡುಗಡೆಯಾಗಿದ್ದು, ಅವುಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಬೇಕು ಎಂದರು.
ಯಾವುದೇ ಇಲಾಖೆಗಳು ಈಗಾಗಲೇ ಆಗಿರುವ ಮನೆಹಾನಿ, ಮಾನವ ಜೀವ ಹಾನಿ, ಜಾನುವಾರು ಜೀವ ಹಾನಿಗೆ ಸಂಬಂಧಿಸಿದಂತೆ ಪರಿಹಾರ ಬಾಕಿ ಇರಿಸಿಕೊಳ್ಳಬಾರದು. ಶಾಲೆ, ಅಂಗನವಾಡಿ ಹಾಗೂ ರಸ್ತೆ ತುರ್ತು ದುರಸ್ಥಿ ಕಾರ್ಯಗಳಿಗೆ ಬಿಡುಗಡೆಯಾಗಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ತ್ವರಿತಗತಿಯಲ್ಲಿ ಕೆಲಸಗಳನ್ನು ಪೂರ್ಣಗೊಳಿಸಬೇಕು. ತಹಶೀಲ್ದಾರರುಗಳು ಕಾಮಗಾರಿಗಳನ್ನು ಸ್ಥಳ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಸೂಚಿಸಿದರು.
ಮುಂಗಾರು ಮಳೆಯಿಂದ ಮನೆಹಾನಿ, ಬೆಳೆಹಾನಿಗೆ ಒಳಗಾದವರಿಗೆ ಪರಿಹಾರದ ಹಣವನ್ನು ನೀಡುವುದು ಬಾಕಿ ಇದ್ದಲ್ಲಿ ಆದಷ್ಟು ಬೇಗನೆ ಅರ್ಹ ಫಲಾನುಭವಿಗಳಿಗೆ ಪರಿಹಾರದ ಹಣವನ್ನು ನೀಡಬೇಕು. ವಿಪತ್ತು ನಿರ್ವಹಣಾ ಕಾರ್ಯಗಳು ಯಾವಾಗ ಬೇಕಾದರೂ ಸಂಭವಿಸುವ ಸಾಧ್ಯತೆ ಇರುವುದರಿಂದ ಅವುಗಳನ್ನು ಎದುರಿಸಲು ಸದಾ ಸನ್ನದ್ಧರಾಗಿರಬೇಕು ಎಂದು ಹೇಳಿದರು.