ಮಂಗಳೂರು, ಜೂ 5 (Daijiworld News/SM): ಕರಾವಳಿಯಲ್ಲಿ ಹಿಂದೂಗಳ ಪ್ರಮುಖ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಸಂಪುಟ ನರಸಿಂಹ ಮಠದ ನಡುವಿನ ಪಾವಿತ್ರ್ಯಕ್ಕೆ ಧಕ್ಕೆ ತರುವ ಷಡ್ಯಂತ್ರ ನಡೆಯುತ್ತಿದೆ. ಜೂನ್ ೧ರಂದು ನಡೆದ ಹಲ್ಲೆ ಪ್ರಕರಣ ವ್ಯವಸ್ಥಿತ ಷಡ್ಯಂತ್ರವಾಗಿದೆ. ಈ ಪವಿತ್ರ ಕ್ಷೇತ್ರದಲ್ಲಿ ಪರಸ್ಪರ ಸಂಘರ್ಷದ ಕಿಡಿಗಳನ್ನು ಹಚ್ಚುವ ಹುನ್ನಾರವನ್ನು ವಿಶ್ವಹಿಂದು ಪರಿಷತ್ ಖಂಡಿಸುವುದಾಗಿ ವಿಹಿಂಪ ಅಧ್ಯಕ್ಷ ಪ್ರೊ ಎಂ ಬಿ ಪುರಾಣಿಕ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೇಗುಲದ ಸಿಬ್ಬಂದಿಯೊಬ್ಬರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿರುವುದು ಸರಿಯಲ್ಲ. ಇದು ದುರದೃಷ್ಟಕರವಾಗಿದೆ. ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಾಗಿರುವ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಮಧ್ಯೆ ಪ್ರವೇಶಿಸಿ ಈ ವಿವಾದವನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.
ದೇವಸ್ಥಾನಗಳಿರುವುದು ಸಮಾಜದಲ್ಲಿನ ಸಾಮರಸ್ಯ, ಧಾರ್ಮಿಕತೆಯನ್ನು ಹೆಚ್ಚಿಸಲು. ಹಾಗೂ ಸಹೋದರತ್ವವನ್ನು ಬೆಳೆಸಬೇಕೆನ್ನುವ ಉದ್ದೇಶದಿಂದ ಎಂಬುವುದನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾಗಿದೆ. ಆದರೆ, ದೇವಸ್ಥಾನದಲ್ಲಿ ಹಲ್ಲೆ ನಡೆಸಿರುವ ಘಟನೆ ನೋವು ತಂದಿದೆ. ಮುಂದೆಂದೂ ಇಂತಹ ಘಟನೆ ನಡೆಯ ಬಾರದು ಎಂದ ಅವರು ಹಲ್ಲೆ ಪ್ರಕರಣವನ್ನು ತೀವ್ರವಾಗಿ ಖಂಡಿಸಿದರು.
ಪ್ರಕರಣದ ಸತ್ಯಾಸತ್ಯತೆ:
ಜೂನ್ 2ನೇ ತಾರಿಕಿನಂದು ಸರ್ಪ ಮಠದಲ್ಲಿ ಸಂಸ್ಕಾರ ನಡೆಯಬೇಕು ಎಂದು ವ್ಯಕ್ತಿಯೊಬ್ಬರು ಫೋನ್ ಕರೆ ಮಾಡಿ ಮುಂಗಡ ತಿಳಿಸಿದ್ದರು. ಆದರೆ, ಜೂನ್ 1ರ ಸಂಜೆ ಮತ್ತೆ ಕರೆ ಬಂದಿದ್ದು ತಮಗೆ ಮಠಕ್ಕೆ ಬರುವ ದಾರಿ ತಿಳಿದಿಲ್ಲ. ನಮ್ಮನ್ನು ಕರೆದೊಯ್ಯಲು ಬನ್ನಿ ಎಂದು ಕರೆ ಮಾಡಿ ತಿಳಿಸಿದ್ದರು. ಅರ್ಚಕರು ಆ ವ್ಯಕ್ತಿಯನ್ನು ಮಠಕ್ಕೆ ಕರೆ ತಂದಿದ್ದು, ಆ ಸಂದರ್ಭ ಆರೋಪಿಗಳಾದ ಗುರುಪ್ರಸಾದ್ ಪಂಜ ಹಾಗೂ ಪ್ರಶಾಂತ್ ಭಟ್ ಮಾಣಿಲ ಅರ್ಚಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ಕಚೇರಿಯೊಳಗಡೆ ಮ್ಯಾನೇಜರ್ ಅವರ ಎದುರಲ್ಲೇ ಹಿಗ್ಗಾಮುಗ್ಗ ಥಳಿಸಿದ್ದು, ಮುಚ್ಚಳಿಕೆ ಬರೆಸಿ ಜೀವ ಬೆದರಿಕೆ ಕೂಡ ಒಡ್ಡಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಇದೇ ಸಂದರ್ಭ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಮಿತಿ ಪ್ರಮುಖರಾದ ಶರಣ್ ಪಂಪ್ವೆಲ್, ಜಗದೀಶ್ ಶೇಣವ, ಭುಜಂಗ ಕುಲಾಲ್, ಶಿವಾನಂದ ಮೆಂಡನ್ ಮೊದಲಾದವರಿದ್ದರು.