ಕುತ್ತಾರು, ನ.25(DaijiworldNews/AA): ಕುತ್ತಾರು ದೆಕ್ಕಾಡುವಿನ ಕೊರಗಜ್ಜನ ಆದಿಸ್ಥಳದಲ್ಲಿ ಜಿಲ್ಲೆ, ಹೊರಜಿಲ್ಲೆ ಹಾಗೂ ಹೊರರಾಜ್ಯಗಳಿಂದ ಬರುವ ಭಕ್ತಾಧಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ನಿರ್ಮಿಸಲಾದ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ, ವಿಶ್ರಾಂತಿ ಕೊಠಡಿ, ಶೌಚಾಲಯಗಳ ಉದ್ಘಾಟನೆ ಸೋಮವಾರ ನಡೆಯಿತು.
ಆದಿಸ್ಥಳದ ಸಮೀಪದಲ್ಲೇ ನಿರ್ಮಿಸಲಾದ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆಯನ್ನು ತುಂಗಾ ಗ್ರೂಪ್ ಆಫ್ ಹೊಟೇಲ್ಸ್ ಇದರ ಅಧ್ಯಕ್ಷ ಸುಧಾಕರ್ ಹೆಗ್ಡೆ ಉದ್ಘಾಟಿಸಿದರು. ನೂತನ ಬಸ್ ನಿಲ್ದಾಣವನ್ನು ಹಿರಿಯ ಸಾಮಾಜಿಕ ಹಾಗೂ ಧಾರ್ಮಿಕ ಮುಂದಾಳು ವಿವೇಕ್ ಶೆಟ್ಟಿ ಬೊಳ್ಯಗುತ್ತು ಉದ್ಘಾಟಿಸಿದರು. ವಿಶ್ರಾಂತಿ ಕೊಠಡಿಗಳನ್ನು ಕುತ್ತಾರು ದೆಕ್ಕಾಡುವಿನ ಶ್ರೀ ಪಂಜಂದಾಯ ಬಂಟ, ವೈದ್ಯನಾಥ ಮತ್ತು ಕೊರಗತನಿಯ ದೈವಗಳ ಅನುಮಂಶಿಕ ಆಡಳಿತ ಮೊಕ್ತೇಸರ ಮಾಗಣತ್ತಡಿ ಶ್ರೀಧರ್ ಶೆಟ್ಟಿ ಉದ್ಘಾಟಿಸಿದರು.
ತಂತ್ರಿಗಳಾದ ಶ್ರೀ ಕೃಷ್ಣಕುನಿಕುಳ್ಳಾಯ ಇವರ ಆಶೀರ್ವಾದದೊಂದಿಗೆ ಅರ್ಚಕರಾದ ಸುರೇಶ್ ಕುನಿಕುಳ್ಳಾಯ ಮತ್ತು ಶ್ರೀಪ್ರಸಾದ ಭಟ್ ಗಣಹೋಮ ನಡೆಸಿಕೊಟ್ಟರು.
ಬಳಿಕ ಸಾಮಾಜಿಕ ಹಾಗೂ ಧಾರ್ಮಿಕ ಮುಂದಾಳು ವಿವೇಕ್ ಶೆಟ್ಟಿ ಬೊಳ್ಯಗುತ್ತು ಮಾತನಾಡಿ, ಕೊರಗಜ್ಜ ಪಂಜಂದಾಯ ಬಂಟನೆಂದರೆ ಸಣ್ಣ ಮಕ್ಕಳಿರುವಾಗಲೇ ದೊಡ್ಡ ಭಕ್ತಿ, ಶಾಲಾ ಪರೀಕ್ಷೆಯಿಂದ ಹಿಡಿದು ಜೀವನದ ಕಷ್ಟಗಳಿರುವಾಗ ಅಜ್ಜನಲ್ಲೇ ಬಂದು ಬೇಡುತ್ತಿದ್ದೆವು. ಕೇಳಿದ ತಕ್ಷಣವೇ ಆಗುವಂತ ಕ್ಷಣಗಳು ರೋಚಕವಾದದ್ದು, ಇದರಿಂದಾಗಿ ಮಕ್ಕಳಿಗೆ, ಮೊಮ್ಮಕ್ಕಳಿಗೂ ಕೊರಗಜ್ಜ ಅಂದಲ್ಲಿ ಅಪಾರ ಭಕ್ತಿ. ಕುತ್ತಾರು ದೆಕ್ಕಾಡುವಿನ ಕೊರಗಜ್ಜನ ಕ್ಷೇತ್ರದ ಮಹಿಮೆ ಕಳೆದ 5-6 ವರ್ಷಗಳಲ್ಲಿ ಕ್ರಾಂತಿಕಾರಿಯಾಗಿ ಪರಿವರ್ತನೆ ಕಂಡಿದೆ. ಖ್ಯಾತ ಚಿತ್ರನಟರಿಂದ ಹಿಡಿದು, ಸರಕಾರಿ ಅಧಿಕಾರಿಗಳು, ಜಿಲ್ಲೆ, ಹೊರಜಿಲ್ಲೆ, ಹೊರರಾಜ್ಯಗಳಿಂದ ಭಕ್ತರ ದಂಡೇ ಆಗಮಿಸುತ್ತಿದ್ದಾರೆ. ಸರಳವಾಗಿರುವ ಆರಾಧನೆಯ ಸ್ಥಳದಲ್ಲಿ ಇಷ್ಟು ಜನ ಬರುತ್ತಾರೆಂದರೆ ಅಜ್ಜನ ಶಕ್ತಿಯನ್ನು ಎಲ್ಲರೂ ತಿಳಿದಿರುತ್ತಾರೆ. ಇದೀಗ ಭಕ್ತರ ಅನುಕೂಲಕ್ಕಾಗಿ ಕ್ಷೇತ್ರದ ಸಮೀಪದಲ್ಲೇ ನಿರ್ಮಿಸಿರುವ ಪಾರ್ಕಿಂಗ್, ವಿಶ್ರಾಂತಿ ಕೊಠಡಿ, ಬಸ್ ನಿಲ್ದಾಣ ಹಾಗೂ ಶೌಚಾಲಯಗಳನ್ನು ಎಲ್ಲರೂ ಸದುಪಯೋಗಪಡಿಸುವಂತಾಗಲಿ ಎಂದು ಹಾರೈಸಿದರು.
ಕ್ಷೇತ್ರದ ಅನುಮಂಶಿಕ ಆಡಳಿತ ಮೊಕ್ತೇಸರರಾದ ಮಾಗಣತ್ತಡಿ ಶ್ರೀಧರ್ ಶೆಟ್ಟಿ ಮಾತನಾಡಿ, ಕ್ಷೇತ್ರಕ್ಕೆ ಬರುವ ಭಕ್ತಾಧಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಕ್ಷೇತ್ರದ ಸಮೀಪದಲ್ಲೇ 50 ಸೆಂಟ್ ವಿಸ್ತೀರ್ಣದಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಜೊತೆಗೆ ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ವಿಶ್ರಾಂತಿ ಕೊಠಡಿಯ ಜೊತೆಗೆ ಸ್ನಾನಗೃಹವೂ ಇದೆ. ಕ್ಷೇತ್ರಕ್ಕೆ ಜಿಲ್ಲೆ, ಹೊರಜಿಲ್ಲೆ, ಹೊರರಾಜ್ಯಗಳಿಂದ ಬರುವ ಭಕ್ತಾಧಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದ್ದು, ಅವರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪಂಜಂದಾಯ-ಕೊರಗಜ್ಜ ದೈವಶಕ್ತಿಗಳ ಅನುಗ್ರಹದಿಂದ ಬರುವ ಭಕ್ತ ಸಮೂಹಕ್ಕೆ ಇಷ್ಠಾರ್ಥವನ್ನು ನೆರವೇರಿಸುವಂತಾಗಲಿ ಎಂದು ಹಾರೈಸಿದರು.
ಕ್ಷೇತ್ರದ ಮೂಲ್ಯಣ್ಣೆ ಬಾಲಕೃಷ್ಣ ಸಾಲ್ಯಾನ್ ಮಾತನಾಡಿ, ಪೂರ್ವ ಕಟ್ಟು ಪ್ರಕಾರ ಪಂಜಂದಾಯ ದೈವದ ವರಪ್ರಸಾದ ಕೊರಗಜ್ಜನ ಆದಿಸ್ಥಳದಲ್ಲಿ ಸಿಗುವ ಕೋಲಾ ಸೇವೆ ಅಜ್ಜನಿಗೆ. ಬೆಳ್ಳಿ, ಬಂಗಾರ, ಹರಕೆ ಎಲ್ಲವೂ ಉಳ್ಳಾಯನ ಭಂಡಾರ ಮನೆಗೆ ಅನ್ನುವ ಪ್ರತೀತಿಯಿದೆ. ಹಿರಿಯ ಕಾಲದಿಂದಲೂ ಮಾಗಣತ್ತಡಿ ಮನೆಯವರು ಪಂಜಂದಾಯ ಮತ್ತು ಅಜ್ಜನ ಸೇವೆಯನ್ನು ಅಚ್ಚುಕಟ್ಟಾಗಿ ನಡೆಸುತ್ತಾ ಬಂದಿದ್ದು, ಮುಂದೆಯೂ ಅಂತಹ ಶಕ್ತಿಯನ್ನು ಅಜ್ಜ ಹಾಗೂ ಪಂಜಂದಾಯ ದೈವ ಕರುಣಿಸಲಿ ಎಂದು ಹಾರೈಸಿದರು.
ಈ ಸಂದರ್ಭ ಶ್ರೀ ಪಂಜಂದಾಯ ಬಂಟ, ವೈದ್ಯನಾಥ ದೈವಗಳ ಮೂಲ್ಯಣ್ಣ ಬಾಲಕೃಷ್ಣ ಸಾಲ್ಯಾನ್, ಮುನ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಹಾಬಲ ಟಿ. ದೆಪ್ಪೆಲಿಮಾರ್, ದೇರಳಕಟ್ಟೆ ಶ್ರೀ ಅಯ್ಯಪ್ಪ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾಸ್ ಅಡ್ಯಂತಾಯ, ಪ್ರಭಾಕರ್ ಶೆಟ್ಟಿ ಕುತ್ತಾರ್ ಗುತ್ತು, ಜಗನ್ನಾಥ್ ಶೆಟ್ಟಿ ಮಾಗಣತ್ತಡಿ, ದಾಮೋದರ್ ಪೂಜಾರಿ, ಭಾಲಕೃಷ್ಣ ರೈ, ಬಾಲಕೃಷ್ಣ ಅಡಪ, ರಘುಪತಿ, ಸುರೇಶ್ ಮಿತ್ತಗೆಲ, ಸೇಸಪ್ಪ ಮಿತ್ತಗೆಲ, ಹರೀಶ್ ಭಂಡಾರಬೈಲು, ವಿಶ್ವರಾಜ್ ಶೆಟ್ಟಿ, ಶ್ರೀಪ್ರಸಾದ್ ಆಳ್ವ, ಕೃಷ್ಣ ಮಡಿವಾಳ, ಲಕ್ಷಣ ಕೃಷ್ಣಕೋಡಿ, ಲೋಕೇಶ್ ಅಗೆಲ, ಸದಾನಂದ ಮರ್ಕೆದು, ದಾಮೋದರ್ ಪೂಜಾರಿ, ದೈವದ ಪಾತ್ರಿ ಯಾದ ಮಾಯಿಲ, ನವೀನ್ ಕೊಟ್ಟಾರಿ, ಪದ್ಮನಾಭ ಮರ್ಕೆದು, ದಯಾನಂದ ಮೂಲ್ಯ, ಪದ್ಮನಾಭ ಪೂಜಾರಿ, ಗಣೇಶ್ ಗಾಣದಮನೆ, ವಿನೋದ್, ಲೋಹಿತ್, ಹಾಗೂ ಮುಂತಾದವರು ಉಪಸ್ಥಿತರಿದ್ದರು.