ಗಂಗೊಳ್ಳಿ, ನ.25(DaijiworldNews/AA): ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದಲ್ಲಿರುವ ಡೊನ್ ಬೋಸ್ಕೊ ಶಾಲೆಯ ರಜತ ಮಹೋತ್ಸವ ಸಮಾರಂಭ ನ. 30ರಂದು ನಡೆಯಲಿದೆ ಎಂದು ಶಾಲೆಯ ಪ್ರಾಂಶುಪಾಲ ಫಾ. ಮ್ಯಾಕ್ಸಿಮ್ ಡಿಸೋಜ ಹೇಳಿದರು.
ಸುದ್ದಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋವಾದಿಂದ ಸಂಸ್ಥೆಯ ಉಪ ವರಿಷ್ಠ ರೆ.ಫಾ.ಬಾಂಜೆಲಾವ್ ತೆಶಿಯೇರಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠ ಧರ್ಮಗುರು ರೆ.ಫಾ.ಫರ್ಡಿನಾಂಡ್ ಗೊನ್ಸಾಲ್ವಿಸ್, ಸಂಸ್ಥೆಯ ಸ್ಥಾಪಕ ರೆ.ಫಾ. ಮೈಕಲ್ ಮಸ್ಕರೇನ್ಹಸ್ ಹಾಗೂ ಕುಂದಾಪುರ ವಲಯದ ಶ್ರೇಷ್ಠ ಧರ್ಮಗುರು ರೆ.ಫಾ.ಪೌಲ್ ರೇಗೋ ಮುಖ್ಯ ಅತಿಥಿಯಾಗಿದ್ದಾರೆ. ರಜತ ಮಹೋತ್ಸವದ ಲೋಗೋವನ್ನು ಅನಾವರಣಗೊಳಿಸಿ ರಜತ ಮಹೋತ್ಸವ ಆಚರಣೆಗೆ ಚಾಲನೆ ನೀಡಲಾಗುವುದು ಎಂದು ಹೇಳಿದ ಅವರು ಸಂಸ್ಥೆಯ ಸ್ಥಾಪಕ ರೆ.ಫಾ ಮೈಕಲ್ ಮಸ್ಕರೇನ್ಹಸ್ ಅವರನ್ನು ಸನ್ಮಾನಿಸಲಾಗುವುದು ಎಂದು ಮಾಹಿತಿ ನೀಡಿದರು.
ಹೊಸಾಡು ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ 66ರಿಂದ ಮೊವಾಡಿಗೆ ಹಾದು ಹೋಗುವ ರಸ್ತೆಯಲ್ಲಿ ಮಂಗಳೂರು ಮೂಲದ ಮುಂಬಯಿಯಲ್ಲಿ ಜನಿಸಿದ ರೆ.ಫಾ. ಮೈಕಲ್ ಮಸ್ಕರೇನ್ಹಸ್ ಅವರು, ನಿರ್ಜನಗುಡ್ಡಗಾಡು ಪ್ರದೇಶದಲ್ಲಿ 2000ನೇ ಇಸವಿಯಲ್ಲಿ 'ಡೊನ್ ಬೊಸ್ಕೊ ಟೆಕ್' ಎಂಬ ಹೆಸರಿನಲ್ಲಿ ವೃತ್ತಿಪರ ತರಬೇತಿಗಳನ್ನು ನೀಡುವ ಮೂಲಕ ಆರಂಭವಾದ ಡೊನ್ ಬಾಸ್ಕೊ ಸಂಸ್ಥೆಯು ಗ್ರಾಮೀಣ ಪ್ರದೇಶದಲ್ಲಿರುವ ಯುವಕರಿಗೆ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸುವ ಆಶಾಕಿರಣವಾಯಿತು. 2011ರಲ್ಲಿ ಉತ್ತಮ ಗುಣ ಮಟ್ಟದ ಕೇಂದ್ರ ಪಠ್ಯಕ್ರಮದ ಡೊನ್ ಬಾಸ್ಕೊ ಸಂಸ್ಥೆಯನ್ನು ಆರಂಭಿಸಲಾಯಿತು ಎಂದರು.
2011ರಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ರೆ.ಫಾ. ಆನಂದ್ ನೊರೊನ್ಹಾ ನೇತೃತ್ವದಲ್ಲಿ ಡೊನ್ ಬೋಸ್ಕೊ ಪ್ರಾಥಮಿಕ ಶಾಲೆಯನ್ನು ಆರಂಭಿಸಲಾಯಿತು. 2012ರಲ್ಲಿ ಮಾಧ್ಯಮಿಕ ಶಾಲೆ 2013ರಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ಹಾಗೂ 2015ರಲ್ಲಿ ಪ್ರೌಢ ಶಾಲೆಯನ್ನು ಆರಂಭಿಸಿ, ಶಾಲೆಯನ್ನು ಕೇಂದ್ರ ಪಠ್ಯಕ್ರಮದ ಸಿ.ಬಿ.ಎಸ್.ಇ. ಬೋರ್ಡಿನ ಅಧೀನತರಲಾಯಿತು. 2021ರಲ್ಲಿ ಸಿ.ಬಿ.ಎಸ್.ಇ. ಪಠ್ಯ ಕ್ರಮದ ಪದವಿ ಪೂರ್ವ ಕಾಲೇಜನ್ನು ಆರಂಭಿಸಲಾಯಿತು. ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡಲಾಗುತ್ತಿದ್ದು, ಶಾಲೆಯಲ್ಲಿ ಸುಮಾರು ೪೮೫ ವಿದ್ಯಾರ್ಥಿಗಳು ವಿದ್ಯಾಬ್ಯಾಸ ಮಾಡುತ್ತಿದ್ದಾರೆ ಎಂದರು.
ಡೊನ್ ಬೊಸ್ಕೊ ಶಾಲೆ ಕಳೆದ 13 ವರ್ಷಗಳಿಂದ ಉತ್ತಮ ಗುಣಮಟ್ಟದ ಶಿಕ್ಷಣ, ಇಂಗ್ಲಿಷ್ ಸಂವಹನದಲ್ಲಿ ಪ್ರವೀಣತೆ, ಸಹ ಪಠ್ಯ ಚಟುವಟಿಕೆಗಳ ಮುಖಾಂತರ ವ್ಯಕ್ತಿತ್ವ ವಿಕಸನ, ಲೀಡ್ ಸ್ಕೂಲ್ ಸಹಯೋಗದಿಂದ ಕಲಿಕೆಯಲ್ಲಿ ವಿದ್ಯಾರ್ಥಿಗಳ ಆಲೋಚನಾ ಶಕ್ತಿ ಹಾಗೂ ಸೃಜನಶೀಲತೆಯ ಬೆಳವಣಿಗೆ, ಆಧುನಿಕ ತಂತ್ರಜ್ಞಾನದ ಕೋಡಿಂಗ್ ಜೊತೆ ಕಂಪ್ಯೂಟರ್ ತರಬೇತಿ, ಸ್ಟೆಮ್ ಮತ್ತು ರೊಬೊಟಿಕ್ಸ್ ಶಿಕ್ಷಣ, ಸುಸಜ್ಜಿತ ತರಗತಿ ಕೊಠಡಿಗಳು, ವಿಜ್ಞಾನ ವಿಷಯಗಳ ಪತ್ಯೇಕ ಪ್ರಯೋಗಾಲಯಗಳು, ಅಂರ್ತಜಾಲ ಸಂಪರ್ಕವುಳ್ಳ ಹವಾನಿಯಂತ್ರಿತ ಗಣಕಯಂತ್ರ ಪ್ರಯೋಗಾಲಯ, ವಿಶಾಲವಾದ ಹಸಿರು ಹಾಸಿಗೆಯ ಫುಟ್ಬಾಲ್ ಮೈದಾನ ಹಾಗೂ ಒಳಾಂಗಣ ಕ್ರೀಡಾ ಸೌಲಭ್ಯ ಹೊಂದಿದೆ ಎಂದರು.
ಸಂಸ್ಥೆಯ ಆಡಳಿತಾಧಿಕಾರಿ ರೋಶನ್, ಉಪಪ್ರಾಂಶುಪಾಲ ಬೈಸ್ ರೊಡ್ರಿಗಸ್, ಶಿಕ್ಷಕ-ರಕ್ಷಕ ಸಮಿತಿ ಅಧ್ಯಕ್ಷ ಸಂತೋಷ ಪಾಯಸ್ ಉಪಸ್ಥಿತರಿದ್ದರು.