ಬಂಟ್ವಾಳ,ಜೂ 6 (Daijiworld News/MSP): ಪುಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ಪೊಲೀಸರು ದಾಳಿ ನಡೆಸಿ 70 ಕೆ.ಜಿ. ದನದ ಮಾಂಸವನ್ನು ವಶಪಡಿಸಿದ್ದಾರೆ. ಪುತ್ತಿಲ ಗ್ರಾಮದ ಮಿತ್ತೇರಿ ಪಾದೆ ಬಳಿ ಪೋಲಿಸರು ದಾಳಿ ಮಾಡಿದಾಗ ಸುಲೈಮಾನ್ ಎಂಬುವವರ ವಾಸ್ತವ್ಯವಿರದ ಮನೆಯ ಬಲ ಬದಿಯಲ್ಲಿರುವ ತಗಡು ಶೀಟಿನ ಶೆಡ್ ನಲ್ಲಿ ಆರೋಪಿಗಳು ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಜಾನುವಾರು ಕಡಿದು ಮಾಂಸ ಮಾಡಿ ಮಾರಾಟ ಮಾಡಲು ಗೋಣಿಯಲ್ಲಿ ತುಂಬಿಸಿಟ್ಟಿದ್ದರು.
ಆರೋಪಿಗಳು ವಿವಿಧೆಡೆಯಿಂದ ಜಾನುವಾರುಗಳನ್ನು ಪಾಳುಬಿದ್ದ ಮನೆಯೊಂದರ ಬಳಿ ನಡೆಯುತ್ತಿದ್ದ ಅಕ್ರಮ ಕಸಾಯಿಖಾನೆಗೆ ನಡೆಸಿ ಮಾಂಸ ಮಾಡಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದ್ದು, ಆರೋಪಿಗಳಲಾದ ಫಾರೂಕ್ ಹಾಗೂ ಇತರ ನಾಲ್ವರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಅಂದಾಜು 70 ಕೆ ಜಿ ಯಷ್ಟು ಜಾನುವಾರಿನ ಮಾಂಸ, ಕೃತ್ಯಕ್ಕೆ ಉಪಯೋಗಿಸಿದ ಸಲಕರಣೆ ಹಾಗೂ ಸಾಗಾಟಕ್ಕೆ ಉಪಯೋಗಿಸುವರೇ ಸ್ಥಳದಲ್ಲಿ ಇರಿಸಿದ ಟಾಟಾ ಎಸಿ ಹೀರೋ ಹೊಂಡಾ ಸ್ಪೆಂಡರ್ ಬೈಕ್-1 , ಕ್ಯಾಲಿಬರ್ ಬೈಕ್-1, ಹೋಂಡಾ ಡಿಯೋ ದ್ವಿಚಕ್ರ ವಾಹನ -1 ಸ್ವಾಧೀನಪಡಿಸಿಕೊಳ್ಳಲಾಗಿದೆ. ಎಲ್ಲ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ 1.61ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ.