ಸುಬ್ರಹ್ಮಣ್ಯ, ಜೂ 6 (Daijiworld News/MSP): ಏಳು ವರ್ಷಗಳಲ್ಲಿ ಗಣನೀಯ ಏರಿಕೆ ಕಂಡು 100 ಕೋಟಿ ರೂ. ಸನಿಹ ತಲುಪುವ ನಿರೀಕ್ಷೆಯಲ್ಲಿದ್ದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಆದಾಯ ಈ ವರ್ಷ ಕುಸಿತ ಕಾಣುವ ಸಾಧ್ಯತೆಯಿದೆ.
2018-19 ನೇ ಸಾಲಿನ ಆರ್ಥಿಕ ವರ್ಷದಲ್ಲಿ, 920913824.98 ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಆದಾಯ ಗಳಿಸಿದ್ದು, ಕಳೆದ ಸಾಲಿಗೆ ಹೋಲಿಸಿದಲ್ಲಿ 3.83 ಕೋಟಿ ರೂ ಕುಸಿತ ದಾಖಲಾಗಿದೆ. ಆದರೂ ರಾಜ್ಯದ ನಂ. 1 ಆದಾಯ ದೇವಾಲಯದ ಸ್ಥಾನಕ್ಕೆ ಚ್ಯುತಿಯಾಗದು ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ತಿಳಿಸಿದ್ದಾರೆ.
ಆದಾಯ ಕುಸಿತ ಕಾಣಲು ರಸ್ತೆ, ರೈಲು ಸಂಚಾರ ವ್ಯತ್ಯಯ ಆಗಿರುವುದೇ ಕಾರಣ ಎನ್ನಲಾಗಿದೆ. ಶಿರಾಡಿ ಘಾಟಿ ರಸ್ತೆ 2ನೇ ಹಂತದ ಅಭಿವೃದ್ಧಿಗಾಗಿ ಮೂರು ತಿಂಗಳ ಕಾಲ ರಸ್ತೆ ಬಂದ್ ಮಾಡಲಾಗಿತ್ತು. ಕಾಮಗಾರಿ ಪೂರ್ಣಗೊಂಡ ಬಳಿಕ ಘಾಟಿಯಲ್ಲಿ ಭೂಕುಸಿತವಾಗಿ ಸಂಚಾರ ವ್ಯತ್ಯಯವಾಗಿತ್ತು. ಮಡಿಕೇರಿ-ಸುಳ್ಯ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯೂ ಭೂಕುಸಿತದಿಂದ ಸಂಪರ್ಕ ಕಳೆದುಕೊಂಡಿತ್ತು. ಬೆಂಗಳೂರು-ಮಂಗಳೂರು ರೈಲ್ವೇ ಮಾರ್ಗದಲ್ಲೂ ಭೂಕುಸಿತ ಸಂಭವಿಸಿ ಯಾನ ಅಸ್ತವ್ಯಸ್ತಗೊಂಡಿತ್ತು. ಇದೆಲ್ಲದರ ಪರಿಣಾಮವಾಗಿ ವರ್ಷದುದ್ದಕ್ಕೂ ಕುಕ್ಕೆ ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆಯಾದದ್ದೇ ಆದಾಯ ಕಡಿಮೆಯಾಗಲು ಮುಖ್ಯ ಕಾರಣ. ದೇಗುಲದ ಕಾಣಿಕೆ, ಹರಕೆ, ನಿತ್ಯದ ಸೇವೆಗಳಲ್ಲಿ ವೃದ್ಧಿಯಾಗದೆ ದೇಗುಲದ ಬೊಕ್ಕಸಕ್ಕೆ ಹೊಡೆತ ಬಿದ್ದಿದೆ ಎನ್ನಲಾಗಿದೆ.
ಮುಜರಾಯಿ ದೇವಸ್ಥಾನಗಳ ಪೈಕಿ ಕುಕ್ಕೆ ದೇಗುಲವು ರಾಜ್ಯ ಸರಕಾರದ ಬೊಕ್ಕಸಕ್ಕೆ ಅತೀ ಹೆಚ್ಚು ಆದಾಯ ತಂದುಕೊಡುತ್ತಿದೆ. 2017-18ನೇ ಸಾಲಿನಲ್ಲಿ 95.92 ಕೋ.ರೂ ಸಂಗ್ರಹಿಸಿತ್ತು. ದೇಗುಲಕ್ಕೆ ದೇಶವಿದೇಶಗಳಿಂದ ಭಕ್ತರು ಆಗಮಿಸು ತ್ತಿದ್ದು, ಬ್ರಹ್ಮರಥೋತ್ಸವ, ವಿವಿಧ ಹರಕೆ ಸೇವೆ, ಕಾಣಿಕೆ, ಛತ್ರಗಳ ಬಾಡಿಗೆ ಮತ್ತು ಕೃಷಿಯಿಂದ ಆದಾಯ ಬರುತ್ತದೆ. ಸರಕಾರದ ನಿಯಮದಂತೆ ಆದಾಯದ ಶೇ.10ರಷ್ಟನ್ನು ಸರಕಾರಕ್ಕೆ ನೀಡಬೇಕಿದೆ.
7 ವರ್ಷಗಳಿಂದ ಆದಾಯ ಸತತವಾಗಿ ಹೆಚ್ಚುತ್ತ ರಾಜ್ಯದಲ್ಲಿ ನಂಬರ್ ವನ್ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೂ ದೇಗುಲ ಈ ವರ್ಷ ಎಂಟನೇ ಬಾರಿ ನಂ. ವನ್ ಸ್ಥಾನ ಉಳಿದುಕೊಳ್ಳುವ ವಿಶ್ವಾಸವಿದೆ ನಿತ್ಯಾನಂದ ಮುಂಡೋಡಿ ತಿಳಿಸಿದ್ದಾರೆ.