ಬಂಟ್ವಾಳ,ನ.27(DaijiworldNews/TA):ತೆಂಗಿನಕಾಯಿ ಕೀಳುವ ವೇಳೆ ಆಯತಪ್ಪಿ ಕೆಳಗೆ ಬಿದ್ದು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೋರ್ವರು ಚಿಕಿತ್ಸೆಗೆ ಸ್ಪಂದಿಸದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನರಾದ ಘಟನೆ ನಡೆದಿದೆ.
ಸರಪಾಡಿ ಎಕ್ಕುಡೇಲು ನಿವಾಸಿ ಗಿರಿಯಪ್ಪ ( 51) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಸ್ವತಃ ಕೃಷಿಕರಾಗಿರುವ ಇವರು ನ.3 ರಂದು ಅವರ ತೋಟದ ತೆಂಗಿನ ಮರದಿಂದ ಕಾಯಿ ಕೀಳಲು ಮರಕ್ಕೆ ಹತ್ತಿದ್ದರು. ಆದರೆ ಆಯತಪ್ಪಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಸುಮಾರು 24 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಇಂದು ಬೆಳಿಗ್ಗೆ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.
ಮೃತರು ಪತ್ನಿ ಹಾಗೂ ಮೂರು ಗಂಡು ಮಕ್ಕಳನ್ನು ಅಗಲಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಗಿರಿಯಪ್ಪ ಅವರನ್ನು ಬದುಕಿಸಲು ವೈದ್ಯಕೀಯ ತಂಡ ಪ್ರಯತ್ನ ಮಾಡಿದೆಯಾದರೂ ಪ್ರಯತ್ನ ಫಲಿಸಲಿಲ್ಲ. ಹಾಗಾಗಿ ಕೊನೆಘಳಿಗೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದ ಗಿರಿಯಪ್ಪ ಅವರ ಅಂಗಾಂಗ ದಾನಕ್ಕೆ ಮುಂದಾದರು. ಗಿರಿಯಪ್ಪ ಅವರ ಎರಡು ಕಣ್ಣುಗಳನ್ನು ದಾನ ಮಾಡಲಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.