ಬಂಟ್ವಾಳ,ನ.28(DaijiworldNews/TA): ಸರಪಾಡಿ ಗ್ರಾಮದ ಪಡ್ಡಾಯಿಬೆಟ್ಟು ನಿವಾಸಿ, ಸರಪಾಡಿ ಮಂಡಲ ಪಂಚಾಯತ್ ಮಾಜಿ ಅಧ್ಯಕ್ಷ ನಾರಾಯಣ ಆಳ್ವ ಪಡ್ಡಾಯಿಬೆಟ್ಟು (89) ಅವರು ನ. 27ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು.
ಮೃತರು ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಪ್ರಗತಿಪರ ಕೃಷಿಕರಾಗಿದ್ದ ನಾರಾಯಣ ಆಳ್ವ ಅವರು ಸುದೀರ್ಘ ಸಮಯ ಸಕ್ರೀಯವಾಗಿ ಕಾಂಗ್ರೆಸ್ ಪಕ್ಷದಲ್ಲಿದ್ದು, ಮಾಜಿ ಸಚಿವ ಬಿ.ರಮಾನಾಥ ರೈ ಅವರ ಆಪ್ತರಾಗಿದ್ದರು. ಸರಪಾಡಿ ಮಂಡಲ ಪಂಚಾಯತ್ ನಲ್ಲಿ ಸುದೀರ್ಘ 25 ವರ್ಷಗಳ ಕಾಲ ಅಧ್ಯಕ್ಷರಾಗಿ, ಮಣಿನಾಲ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ, ಸರಪಾಡಿ ಸರಕಾರಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ, ಸರಪಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಸ್ಥಾಪನೆಗೆ ಕಾರಣರಾಗಿ ಸ್ಥಾಪಕಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಜಿ.ಪಂ.ಮಾಜಿ ಸದಸ್ಯ ಬಿ.ಪದ್ಮಶೇಖರ್ ಜೈನ್, ತಾ.ಪಂ.ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ಅಂಚನ್, ಮಣಿನಾಲ್ಕೂರು ಸಿಎ ಬ್ಯಾಂಕ್ ಸಿಇಒ ಸುಧಾಕರ ಶೆಟ್ಟಿ ಹೆಗ್ಗಡೆಕೋಡಿ ಸೇರಿದಂತೆ ಹಲವು ಗಣ್ಯರು ಮೃತರ ಅಂತಿಮ ದರ್ಶನ ಪಡೆದರು. ಮಾಜಿ ಸಚಿವ ಬಿ.ರಮಾನಾಥ ರೈ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.