ಬಂಟ್ವಾಳ, ಜೂ06(Daijiworld News/SS): ಸಮೃದ್ಧ ಮಳೆಗಾಗಿ ನೇತ್ರಾವತಿ ನದಿ ಮತ್ತು ಮೃತ್ಯುಂಜಯ ಹೊಳೆ ಸಂಗಮವಾಗುವ ಧರ್ಮಸ್ಥಳ ಬಳಿಯ ಕಲ್ಮಂಜದ ಪಜಿರಡ್ಕ ಎಂಬಲ್ಲಿ ವರುಣ ಹೋಮವನ್ನು ನೆರವೇರಿಸಲಾಗಿದೆ.
ಕರಾವಳಿಯಲ್ಲಿ ಮಳೆಗಾಗಿ ಪ್ರಾರ್ಥಿಸಿ ದೇವಾಲಯಗಳಲ್ಲಿ ಪೂಜೆ, ಹೋಮಗಳು ಮುಂದುವರಿದಿದೆ. ಮಂಗಳೂರಿನ ಜನತೆ ಮಳೆಗಾಗಿ ಪ್ರಾರ್ಥನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ದೇವರಲ್ಲಿ ಭಕ್ತಿಯಿಂದ ಪ್ರಾರ್ಥಿಸಿ, ಪೂಜೆ ಪುನಸ್ಕಾರ ಮಾಡಿ, ಎಲ್ಲಾ ಜಾತಿ, ಮತ, ಧರ್ಮದವರು ಒಟ್ಟಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಮಳೆಯಿಲ್ಲದೇ ನೇತ್ರಾವತಿ ನದಿ ಬತ್ತಿ ಹೋಗಿದ್ದು, ಈಗ ನೇತ್ರಾವತಿ ನದಿಯಲ್ಲೇ ವರುಣ ಹೋಮ ನಡೆಸಿ ವರುಣ ದೇವ ಕೃಪೆ ತೋರುವಂತೆ ಪ್ರಾರ್ಥನೆ ಮಾಡಿದ್ದಾರೆ.
ಬೆಂಗಳೂರಿನ ಜೋಡಿ ಮುನೇಶ್ವರ ದೇವಸ್ಥಾನದ ತಂಡ ನದಿ ದಡದಲ್ಲಿ ವಿಶೇಷ ಪೂಜೆ ಹಾಗು ವರುಣ ಹೋಮವನ್ನು ನೆರವೇರಿಸಿದೆ. ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ12 ಗಂಟೆ ತನಕ ಈ ಹೋಮ ನಡೆದಿದೆ.
ಮಾತ್ರವಲ್ಲ, ಮಳೆಗಾಗಿ ರಾಜ್ಯದ ವಿವಿಧ ದೇವಾಲಯಗಳಲ್ಲಿ ಸರ್ಕಾರದ ವತಿಯಿಂದ ವಿಶೇಷ ಪೂಜೆ ನಡೆಸಲಾಗುತ್ತಿದೆ. ಇತ್ತೀಚೆಗೆ ಶೀಘ್ರ ಮಳೆಗಾಗಿ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಹಲವು ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಗಿತ್ತು.