ಉಡುಪಿ, ಜೂ06(Daijiworld News/SS): ಸರ್ಕಾರದ ಲೋಪದೋಷ ಹೇಳುವುದು ಮೀಡಿಯಾಗಳ ಜವಾಬ್ದಾರಿ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳಿಗೆ ಅವರದ್ದೇ ಆದ ಜವಾಬ್ದಾರಿ ಇದೆ. ಸರ್ಕಾರದ ಲೋಪದೋಷ ಹೇಳುವುದು ಮೀಡಿಯಾಗಳ ಜವಾಬ್ದಾರಿ. ಅಕ್ರಮಗಳ ವರದಿ ಮಾಡುವುದು ಮಾಧ್ಯಮಗಳ ಜವಾಬ್ದಾರಿ. ಸರ್ಕಾರ ವಾಮಮಾರ್ಗದಲ್ಲಿ ಮಾಧ್ಯಮಗಳ ಬಾಯಿ ಬಂದ್ ಮಾಡಲು ಯತ್ನಿಸುವುದು ಬೇಡ ಎಂದು ಹೇಳಿದರು.
ಇದೇ ವೇಳೆ ಬಳ್ಳಾರಿ ಕೃಷ್ಣದೇವರಾಯ ವಿಶ್ವ ವಿದ್ಯಾಲಯ ಅಕ್ರಮದ ಬಗ್ಗೆ ಸುದ್ದಿ ಮಾಡಿದ್ದಕ್ಕೆ ವರದಿಗಾರನನ್ನು ಬಂಧನ ಮಾಡಿದ್ದನ್ನು ಕೋಟ ಶ್ರೀನಿವಾಸ ಪೂಜಾರಿ ಖಂಡಿಸಿದರು.
ಮಾಧ್ಯಮಗಳ ಧ್ವನಿ ಧಮನ ಮಾಡಿದರೆ ಬಿಜೆಪಿ ಸುಮ್ಮನಿರಲ್ಲ. ಈ ಬಗ್ಗೆ ಉನ್ನತ ಶಿಕ್ಷಣ ಸಚಿವರ ಜೊತೆ ಮಾತನಾಡಲು ಪ್ರಯತ್ನಿಸಿದೆ. ಜಿ.ಟಿ ದೇವೇಗೌಡ ಸಚಿವ ಸಂಪುಟ ಸಭೆಯಲ್ಲಿ ಇದ್ದಾರೆ. ವರದಿಗಾರನನ್ನು ಬಂಧಿಸುವ ಬದಲು ಅಕ್ರಮ ಸರಿಪಡಿಸುವ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಲಿ ಎಂದು ತಿಳಿಸಿದರು.
ಸರ್ಕಾರ ಸತ್ಯಾಸತ್ಯತೆ ಅರಿತು ವಿಶ್ವ ವಿದ್ಯಾಲಯದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತು. ಬದಲಾಗಿ ವರದಿಗಾರರ ಬಂಧನ ಖಂಡನೀಯ ಎಂದು ಹೇಳಿದರು.