ಸುಬ್ರಹ್ಮಣ್ಯ, ಡಿ.05(DaijiworldNews/AA): ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಅಂಗಡಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, ತಂಬಾಕು ಉತ್ಪನ್ನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಅಂಗಧಿಗಳಲ್ಲಿ ತಂಬಾಕು ಉತ್ಪನ್ನಗಳಾದ ಸಿಗರೇಟ್, ಪಾನ್ ಪರಾಗ್, ಮಧು, ಮಾರುತಿ, ಕೂಲ್ ಲಿಪ್ ಬೇರೆ ಬೇರೆ ರೀತಿಯ ತಂಬಾಕು ಉತ್ಪನ್ನಗಳನ್ನು ಹಾಗೂ ನಿಷೇಧಿತ ಪ್ಲಾಸ್ಟಿಕ್ಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸುಬ್ರಹ್ಮಣ್ಯ ಗ್ರಾ.ಪಂ. ಅಧ್ಯಕ್ಷರು, ಸದಸ್ಯರು, ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ಸಿಬ್ಬಂದಿ, ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ದೇವಸ್ಥಾನದ ಸಿಬ್ಬಂದಿ, ಸುಬ್ರಹ್ಮಣ್ಯ ಪೊಲೀಸರು ಅಂಗಡಿಗಳ ಮೇಲೆ ದಿಢೀರ್ ದಾಳಿ ನಡೆಸಿ ಪರಿಶೀಲಿಸಿದರು.
ದಾಳಿ ವೇಳೆ ತಂಬಾಕು ಉತ್ಪನ್ನಗಳ ದಾಸ್ತಾನು, ಮಾರಾಟ ಪತ್ತೆಯಾಗಿದ್ದು, ಅಧಿಕಾರಿಗಳು ತಂಬಾಕು ಪದಾರ್ಥಗಳನ್ನು ವಶಕ್ಕೆ ಪಡೆದು ಅಂಗಡಿಯವರಿಗೆ ದಂಡ ವಿಧಿಸಿದರು. ದೇವಸ್ಥಾನದ ಸುತ್ತಮುತ್ತ ಎಲ್ಲಿಯೂ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಬಾರದು. ಒಂದು ವೇಳೆ ಮಾರಾಟ ಮಾಡಿದರೆ ಮುಂದಿನ ದಿನಗಳಲ್ಲಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅಮಗಡಿಯವರಿಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಈ ದಾಳಿಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಸುಜಾತಾ ಕಲ್ಲಾಜೆ, ತಾಲೂಕು ಆರೋಗ್ಯಾಧಿಕಾರಿ ಡಾ. ನಂದಕುಮಾರ್, ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ತ್ರಿಮೂರ್ತಿ, ಗ್ರಾಮ ಪಂಚಾಯತ್ ಪಿಡಿಒ ಮಹೇಶ್, ಕಾರ್ಯದರ್ಶಿ ಮೋನಪ್ಪ ಡಿ., ಗ್ರಾ.ಪಂ. ಮಾಜಿ ಅಧ್ಯಕ್ಷೆ ಲಲಿತಾ ಗುಂಡಡ್ಕ, ಸದಸ್ಯೆ ಭಾರತಿ ದಿನೇಶ್, ಗ್ರಾ.ಪಂ. ಸಿಬ್ಬಂದಿ, ಸಂಜೀವಿನಿ ಒಕ್ಕೂಟ ಸದಸ್ಯರು ಭಾಗಿಯಾಗಿದ್ದರು.