ಉಳ್ಳಾಲ,ಡಿ.05 (DaijiworldNews/TA):ತಾಲೂಕು ವ್ಯಾಪ್ತಿಯ ಅಮಾನತ್ತಿನಲ್ಲಿಡಲಾಗಿದ್ದ 420 ಬಿ.ಪಿ.ಎಲ್ ಪಡಿತರ ಚೀಟಿಯನ್ನು ಸಂಪೂರ್ಣವಾಗಿ ಚಾಲ್ತಿಯಲ್ಲಿರುವಂತೆ ಮಾಡುವ ಮೂಲಕ ಸರಕಾರದಿಂದ ಸಿಗುವ ಸಂಪೂರ್ಣ ಸವಲತ್ತಿಗೆ ಅರ್ಹರಾಗಿರುತ್ತಾರೆ. ಈ ಮೂಲಕ ಉಳ್ಳಾಲ ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಈ ಕ್ಷೇತ್ರದ ಶಾಸಕರಿಗೆ ಅಭಿನಂದನೆ ಸಲ್ಲಿಸುತ್ತಿದೆ ಎಂದು ಉಳ್ಳಾಲ ತಾಲೂಕು ಪಂಚ ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಫೀಕ್ ಅಂಬ್ಲಮೊಗರು ತಿಳಿಸಿದರು.

ಅವರು ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಮಂಗಳೂರು ವಿಧಾನಸಭಾ ಕ್ಷೇತ್ರ ಉಳ್ಳಾಲ ತಾಲೂಕು ವ್ಯಾಪ್ತಿಯ ಸುಮಾರು 29,415 ಬಿ.ಪಿ.ಎಲ್ ಪಡಿತರ ಚೀಟಿದಾರರ ಕುಟುಂಬಗಳಿವೆ. ಕೆಲವು ದಿನಗಳ ಹಿಂದೆ ಪಡಿತರ ಚೀಟಿಗಳಲ್ಲಿ ಕೆಲವು ಮಾನದಂಡಗಳ ಆಧಾರದಲ್ಲಿ 420 ಬಿ.ಪಿ.ಎಲ್. ಪಡಿತರ ಚೀಟಿಗಳನ್ನು ಅಮಾನತ್ತಿನಲ್ಲಿಡಲಾಗಿತ್ತು.
ಈ ಬಗ್ಗೆ ತಕ್ಷಣವೇ ಉಳ್ಳಾಲ ತಾಲೂಕು ಪಂಚ ಗ್ಯಾರೆಂಟಿ ಅನುಷ್ಠಾನ ಸಮಿತಿಯು ಅಮಾನತ್ತಿನಲ್ಲಿಡಲಾಗಿದ್ದ 420 ಬಿ.ಪಿ.ಎಲ್ ಪಡಿತರ ಚೀಟಿಯನ್ನು ಚಾಲ್ತಿಯಲ್ಲಿಡುವಂತೆ ಆಗ್ರಹಿಸಿತ್ತು. ನಂತರ ಈ ಬಗ್ಗೆ ಸಭಾಧ್ಯಕ್ಷ ಯು.ಟಿ ಖಾದರ್ ಜೊತೆ ಚರ್ಚಿಸಲಾಯಿತು. ಅವರು ಸಿಎಂ, ಡಿಸಿಎಂ ಸಚಿವ ಕೆ.ಎಚ್ ಮುನಿಯಪ್ಪ, ಆಹಾರ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ತಕ್ಷಣವೇ ರಾಜ್ಯ ಹಾಗೂ ಕ್ಷೇತ್ರದ ಬಿ.ಪಿ.ಎಲ್ ಪಡಿತರ ಚೀಟಿಗಳ ಸಮಸ್ಯೆಗಳನ್ನು ಜನಸಾಮಾನ್ಯರ ಹಿತದೃಷ್ಟಿಯಿಂದ ಕೂಡಲೇ ಸಮಸ್ಯೆಗೆ ಪರಿಹಾರಕ್ಕೆ ತಕ್ಷಣವೇ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆಯನ್ನು ನೀಡಿದ್ದರು. ಈ ಮೂಲಕ ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿ ಅಮಾನತ್ತಿನಲ್ಲಿಡಲಾಗಿದ್ದ 420 ಬಿ.ಪಿ.ಎಲ್ ಪಡಿತರ ಚೀಟಿ ಚಾಲ್ತಿಯಲ್ಲಿಡುವಂತೆ ಕ್ರಮಕೈಗೊಳ್ಳಲಾಯಿತು ಎಂದು ಅವರು ತಿಳಿಸಿದರು.
ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾ ಉಪಾಧ್ಯಕ್ಷೆ ಸುರೇಖಾ ಚಂದ್ರಹಾಸ್ ,ಉಳ್ಳಾಲ ತಾಲೂಕು ಪಂಚ ಗ್ಯಾರೆಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಜಸಿಂತಾ ಮೆಂಡೊನ್ಸ, ದೇವಣ್ಣ ಶೆಟ್ಟಿ ಮುಂತಾದವರು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.