ಕುಂದಾಪುರ, ಜೂ 07(Daijiworld News/MSP): ಕೋಟ ಸಮೀಪದ ಮಣೂರಿನಲ್ಲಿ ಜ.26 ರ ತಡರಾತ್ರಿ ನಡೆದ ಜೋಡಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ 17 ಆರೋಪಿಗಳ ಪೈಕಿ ಜಾಮೀನು ನೀಡುವಂತೆ ವಕೀಲರ ಮೂಲಕ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದ ಆರೋಪಿ ಪ್ರಣವ್ ರಾವ್ ಎಂಬಾತನ ಜಾಮೀನು ಅರ್ಜಿಯನ್ನು ಇಲ್ಲಿನ ಜಿಲ್ಲಾ ಮತ್ತು ಹೆಚ್ಚುವರಿ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಕಾಶ್ ಖಂಡೇರಿ ತಿರಸ್ಕರಿಸಿದ್ದಾರೆ.
ಭರತ್ ಹಾಗೂ ಯತೀಶ್
ಆರೋಪಿ ಪ್ರಣವ್ ರಾವ್
ಜ. 26 ರಂದು ತಡರಾತ್ರಿ ಮಣೂರಿನಲ್ಲಿ ಭರತ್ ಹಾಗೂ ಯತೀಶ್ ಕಾಂಚನ್ ಕೊಲೆ ನಡೆದಿತ್ತು. ಆರೋಪಿ ಪ್ರಣವ್ ರಾವ್ ಭದ್ರಾವತಿ ಮೂಲದವನಾಗಿದ್ದು ಉಡುಪಿಯಲ್ಲಿ ನೆಲೆಸಿದ್ದಾನೆ. ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿಯಾಗಿದ್ದ ಈತ ಜೋಡಿ ಕೊಲೆ ಆರೋಪಿತರಿಗೆ ಹಣ ಮತ್ತು ಮೊಬೈಲ್ ನೀಡಿ ಸಹಕರಿಸಿದ್ದ ಆರೋಪದಡಿಯಲ್ಲಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ. ಈತನ ಮೇಲೆ ಐಪಿಸಿ ಸೆಕ್ಷನ್ 212 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ನ್ಯಾಯಾಲಯಕ್ಕೆ ಸದ್ಯ ದೋಷಾರೋಪಣೆ ಪಟ್ಟಿ ಸಲಿಕೆಯಾಗಿದೆ. ಜನತೆಯನ್ನು ಬೆಚ್ಚಿಬೀಳಿಸಿದ ಜೋಡಿ ಕೊಲೆ ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯಾಧಾರಗಳ ವಿಚಾರಣೆ ಇನ್ನಷ್ಟೇ ನಡೆಯಬೇಕಿದ್ದು ಈ ಹಂತದಲ್ಲಿ ಆರೋಪಿಗೆ ಜಾಮೀನು ನೀಡುವುದರಿಂದ ಸಾಕ್ಷಿ ನಾಶ ಸಂಭವವಿದೆ ಎಂದು ಪ್ರಾಸಿಕ್ಯೂಶನ್ ಪರ ಜಿಲ್ಲಾ ಸರ್ಕಾರಿ ಅಭಿಯೋಜಕ ಬೇಳೂರು ಪ್ರಕಾಶ್ಚಂದ್ರ ಶೆಟ್ಟಿಯವರು ವಾದ ಮಂಡಿಸಿದ್ದು ಜಾಮೀನು ಅರ್ಜಿ ವಜಾಗೊಳಿಸುವಂತೆ ಮನವಿ ಮಾಡಿದ್ದರು. ಈ ವಾದವನ್ನು ಪುರಸ್ಕರಿಸಿದ ನ್ಯಾಯಾಧೀಶರು ಆರೋಪಿ ಪ್ರಣವ್ ರಾವ್ ಜಾಮೀನು ಅರ್ಜಿ ವಜಾಗೊಳಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ರೆಡ್ಡಿ ಸೋದರರಾದ ಹರೀಶ್ ರೆಡ್ಡಿ, ರಾಜಶೇಖರ್ ರೆಡ್ಡಿ, ಚಂದ್ರಶೇಖರ ರೆಡ್ಡಿ, ರತೀಶ್ ಎಂ. ಕರ್ಕೇರಾ, ಒಳಸಂಚು ನಡೆಸಿದ ಆರೋಪ ಹೊತ್ತಿರುವ ರಾಘವೇಂದ್ರ ಕಾಂಚನ್, ಸಹಕರಿಸಿದ ಆರೋಪದಲ್ಲಿ ಡಿ.ಎ.ಆರ್. ಪೊಲೀಸ್ ಸಿಬ್ಬಂದಿಗಳಾದ ಪವನ್ ಅಮೀನ್, ವಿರೇಂದ್ರ ಆಚಾರ್ಯ, ವಿದ್ಯಾರ್ಥಿ ಪ್ರಣವ್ ರಾವ್, ಮಹಮ್ಮದ್ ತೌಸೀಪ್, ಹಾಗೂ ಪ್ರಕರಣದಲ್ಲಿ ಭಾಗಿಯಾದ ಮಹೇಶ್, ಮೆಡಿಕಲ್ ರವಿ, ರವಿಚಂದ್ರ, ಅಭಿಷೇಕ ಅಲಿಯಾಸ್ ಅಭಿ ಪಾಲನ್ ,ಸಂತೋಷ್ ಕುಂದರ್, ನಾಗರಾಜ ಅಲಿಯಾಸ್ ರೊಟ್ಟಿ ನಾಗರಾಜ, ಸುಜಯ್, ಶಂಕರ ಮೊಗವೀರ, ಸದ್ಯ ಜೈಲಿನಲ್ಲಿದ್ದಾರೆ.