ಮಂಗಳೂರು,ಡಿ.06 (DaijiworldNews/TA): ಡಾ. ಕದ್ರಿ ಗೋಪಾಲನಾಥ್ ಅಕಾಡೆಮಿ ಫಾರ್ ಆರ್ಟ್ಸ್ ಸಂಸ್ಥೆಯು ಪ್ರತಿ ವರ್ಷವೂ ನಡೆಸುತ್ತಾ ಬರುತ್ತಿರುವ, ಕದ್ರಿ ಸಂಗೀತ ಸೌರಭ ಕಾರ್ಯಕ್ರಮವನ್ನು ಡಿ. 7 ರಂದು ಮಂಗಳೂರಿನ ಅಂಬೇಡ್ಕರ್ ಭವನದಲ್ಲಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಮಣಿಕಾಂತ್ ಕದ್ರಿ ತಿಳಿಸಿದ್ದಾರೆ.

ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷದ ಡಾ. ಕದ್ರಿ ಗೋಪಾಲನಾಥ್ ಜೀವಮಾನ ಸಾಧನೆ ಶ್ರೇಷ್ಠ ಪ್ರಶಸ್ತಿಯನ್ನು ಮೋಹನ ವೀಣಾ ಸೃಷ್ಟಿಕರ್ತ ಹಾಗೂ ವಾದಕ, ವಿಶ್ವ ವಿಖ್ಯಾತ ಗ್ರಾಮ್ಮಿ ಪ್ರಶಸ್ತಿ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಪಂಡಿತ್ ವಿಶ್ವಮೋಹನ ಭಟ್ ರವರಿಗೆ ನೀಡಲು ತೀರ್ಮಾನಿಸಲಾಗಿದೆ.
ಡಿ.7ರ ಬೆಳಿಗ್ಗೆ 10 ಗಂಟೆಯಿಂದ ಡಾ. ಕದ್ರಿ ಗೋಪಾಲನಾಥ್ ರವರ ಶಿಷ್ಯ ವೃಂದ ಹಾಗೂ ಪ್ರತಿಭಾನ್ವಿತ, ಉದಯೋನ್ಮುಖ ಕಲಾವಿದರಿಂದ ನಿರಂತರ ಗುರು ವಂದನೆ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.