ಮಂಗಳೂರು, ಡಿ.07 (DaijiworldNews/TA): ನಗರದ ಪೊಲೀಸ್ ಕಮಿಷನರ್ ವಿನಾ ಕಾರಣ ಹೋರಾಟಗಾರರ ಮೇಲೆ ಎಫ್ಐಆರ್ ದಾಖಲಿಸುವ, ಪ್ರತಿಭಟನೆಯ ಹಕ್ಕನ್ನು ನಿರಾಕರಿಸುತ್ತಿರುವುದು ಸಂವಿಧಾನ ವಿರೋಧಿ ಮತ್ತು ಈ ನೆಲದ ಕಾನೂನು ವಿರೋಧಿ ನಡೆಯಾಗಿದೆ. ಇಂತಹ ವರ್ತನೆ ಬದಲಾಯಿಸದಿದ್ದರೆ ಕಮಿಷನರ್ ಅನುಪಮ್ ಅಗರ್ವಾಲ್ ಮಂಗಳೂರಿಗೆ ಬೇಕಾಗಿಲ್ಲ. ಕೂಡಲೇ ವರ್ಗಾಯಿಸಲು ಕ್ರಮಕೈಗೊಳ್ಳಿ ಇಲ್ಲವೆಂದಾದರೆ ಜಿಲ್ಲಾಡಳಿತ ಕಾರ್ಯಕ್ರಮಗಳಿಗೆ ಮುತ್ತಿಗೆ ಹಾಕಲಿದ್ದೇವೆ ಎಂದು ಸಿಪಿಐಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ಎಚ್ಚರಿಸಿದರು.

ಅವರು ಡಿವೈಎಫ್ಐ ಸಿಪಿಐಎಂ ಬಜಾಲ್ ವಿಭಾಗ ಸಮಿತಿ ನೇತೃತ್ವದಲ್ಲಿ ನಗರದ ಪಂಪ್ವೆಲ್ ವೃತ್ತದ ಬಳಿ ಕಮಿಷನರ್ ಅಗರ್ವಾಲ್ ವರ್ಗಾವಣೆಗೆ ಒತ್ತಾಯಿಸಿ ನಡೆಸಿದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು. ಡಿವೈಎಫ್ಐ ದ.ಕ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಮಾತನಾಡುತ್ತಾ, ಜನಪರ ಇರಬೇಕಾದ ಜನಪ್ರತಿನಿಧಿಗಳು ಜನವಿರೋಧಿಯಾಗಿರುವ ಕಮಿಷನರ್ ಪರ ಬ್ಯಾಟಿಂಗ್ ಮಾಡುವ ನಡೆ ಒಳ್ಳೆಯದಲ್ಲ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಕಾರ್ಮಿಕ ಮುಖಂಡರಾದ ಜೆ ಬಾಲಕೃಷ್ಣ ಶೆಟ್ಟಿ, ಮಾಜಿ ಕಾರ್ಪೊರೇಟರ್ ಜಯಂತಿ ಬಿ ಶೆಟ್ಟಿ, ಡಿವೈಎಫ್ಐ ಮುಖಂಡರಾದ ಜಗದೀಶ್ ಬಜಾಲ್ ಮುಂತಾದವರು ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.