ಬೆಳ್ತಂಗಡಿ, ಜೂ 07 (Daijiworld News/MSP): ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಕಡೆಯಿಂದ ಉಜಿರೆ ಕಡೆಗೆ ಅಕ್ರಮವಾಗಿ ಹಿಂಸಾತ್ಮಕವಾಗಿ ಗೋ ಸಾಗಾಟ ಮಾಡುತಿದ್ದ ಐಷಾರಾಮಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿಮುಂಡಾಜೆ ಎಂಬಲ್ಲಿ ಕಮರಿಗೆ ಉರುಳಿ ಕಾರಿನೊಳಗಿದ್ದ 6 ದನಗಳು ಸತ್ತು ಬಿದ್ದಿರುವ ಘಟನೆ ಜಾನೆ 5.30ರ ವೇಳೆಗೆ ನಡೆದಿದೆ.
KA05MQ4824 ಸಂಖ್ಯೆಯ ಬೆಂಗಳೂರು ನೊಂದಣಿ ಕಾರು ಕಮರಿಗೆ ಉರುಳುತಿದ್ದಂತೆ ಕಾರಿನಲ್ಲಿದ್ದ ಅಕ್ರಮ ಗೋ ಸಾಗಾಟಗಾರರು ಪರಾರಿಯಾಗಿದ್ದು ಕಾರು ಸಂಪೂರ್ಣ ನಜ್ಜು ನುಜ್ಜಾಗಿದೆ. ಕಾರಿನೊಳಗೆ ಬ್ರೇಡ್ ಪ್ಯಾಕೇಟ್ ಪತ್ತೆಯಾಗಿದ್ದು, ಗೋವುಗಳಿಗೆ ಪ್ರಜ್ಞೆ ತಪ್ಪಿಸಿವ ಸಲುವಾಗಿ ಬ್ರೇಡ್ ನಲ್ಲಿ ವಿಷಕಾರಿ ವಸ್ತುಗಳನ್ನು ತಿನ್ನಿಸಿರುವ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
ಚೆಕ್ ಪೋಸ್ಟ್ ಗಳ ವಿರುದ್ದ ಸಾರ್ವಜನಿಕ ಆಕ್ರೋಶ:
ಅಕ್ರಮ ಗೋ ಸಾಗಾಟದ ಕಾರು ವಾಹನ ಸಾಗಿ ಬರುವ ದಾರಿಯಲ್ಲಿ ಚಾರ್ಮಾಡಿ ಚೆಕ್ ಪೋಸ್ಟ್ ಇದ್ದು ಕಾರಿನ ತೀವ್ರ ತಪಾಸಣೆ ನಡೆಸದೆ ಇರೋದು ದಂಧೆಕೋರರಿಗೆ ವರವಾಗಿ ಪರಿಣಮಿಸಿದೆ. ಈ ಘಟನೆಯಲ್ಲಿ ಚೆಕ್ ಪೋಸ್ಟ್ ಭದ್ರತಾ ವೈಫಲ್ಯವನ್ನು ಎತ್ತಿ ತೋರಿಸುವಂತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.