ಉಡುಪಿ, ಡಿ.7 (DaijiworldNews/AK): ಕಳೆದ ಹತ್ತು ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದ ಮೋದಿ ಸರಕಾರ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದರು. ಹತ್ತು ವರ್ಷಕ್ಕೆ 20 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಆದರೆ, ಪ್ರತಿ ಹಂತದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಪ್ರತಿ ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಉದ್ಯೋಗಕ್ಕಾಗಿ ಅರಸಿ ಬರುವವರನ್ನು ನೋಡಬಹುದು. ಉದ್ಯೋಗವಿಲ್ಲದೇ ತಂದ ಬುತ್ತಿಯನ್ನು ತಿಂದು, ಮನೆಗೆ ತೆರಳುವವರ ಸಂಖ್ಯೆ ಹೆಚ್ಚಾಗಿದೆ. ಇಂತಹ ಪರಿಸ್ಥಿತಿ ದೇಶವ್ಯಾಪಿ ಇದೆ. ಇದ್ದ ಕೆಲಸಕ್ಕೂ ಕೂಡ ಭದ್ರತೆ ಇಲ್ಲ. 3೦ ಸಾವಿರ ಕಾರ್ಮಿಕರಿರುವ ಕಾರ್ಖಾನೆಗಳಲ್ಲಿ 1 ಸಾವಿರ ಖಾಯಂ ನೌಕರರಿರುತ್ತಾರೆ. ಮೋದಿ ಕಾಲದಲ್ಲಿ ಕಾಂಟ್ರ್ಯಾಕ್ಟ್ ಪದ್ಧತಿ ಜ್ಯಾರಿ ಮಾಡಲಾಗುತ್ತಿದೆ ಎಂದು ಸಿ.ಪಿ.ಎಂ. ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಡಾ. ಪ್ರಕಾಶ್ ಕೆ. ಹೇಳಿದರು.


ನಮ್ಮ ದೇಶದ ಸಂವಿಧಾನದಲ್ಲಿ ಅಸಮಾನತೆ ಇಲ್ಲ ಸಮಾನತೆ ಇದೆ ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಂವಿಧಾನದ ಬಗ್ಗೆ ಅಪಸ್ವರ ಎತ್ತಿ ಸಂವಿಧಾನ ವಿರೋಧಿಯಾಗಿ ಮಾತನಾಡುತ್ತಿದ್ದಾರೆ ಎಂದು ಹೇಳಿದರು.
ಅವರು ನಾಡಾದಲ್ಲಿ ನೆಡೆಯುತ್ತಿರುವ ಉಡುಪಿ ಜಿಲ್ಲಾ ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷದ 8ನೇ ಜಿಲ್ಲಾ ಸಮ್ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಉದ್ಯೋಗವೆಂದರೆ ಬಂಡವಾಳಗಾರರು ಲೂಟಿ ಮಾಡಲು ಅವಕಾಶ ಮಾಡಿಕೊಡುವ ಯೋಜನೆ ಎಂದು ಮೋದಿ ತಿಳಿದುಕೊಂಡಿದ್ದಾರೆ. ಅದಕ್ಕಾಗಿಯೇ ಭಾರತದ ಸಂಪತ್ತನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಡಾ. ಪ್ರಕಾಶ್. ಕೆ. ಹೇಳಿದರು.
ಸಮ್ಮೇಳನದ ಧ್ವಜಾರೋಹಣವನ್ನು ಸಿ.ಪಿ.ಎಂ. ಪಕ್ಷದ ಹಿರಿಯ ಮುಖಂಡರಾದ ಎ.ಎಸ್. ಆಚಾರ್ಯ ನೆರವೇರಿಸಿ ಮಾತನಾಡುತ್ತಾ, ನಿಜವಾದ ಪ್ರಜಾಪ್ರಭುತ್ವ ವ್ಯವಸ್ಥೆ ಇರುವುದು ಸಿ.ಪಿ.ಎಂ. ಪಕ್ಷದಲ್ಲಿ ಮಾತ್ರ. ಗ್ರಾಮ, ವಲಯ, ತಾಲೂಕು, ಜಿಲ್ಲೆ, ರಾಜ್ಯ ಹೀಗೆ ರಾಷ್ಟ್ರ ಸಮ್ಮೇಳನ ನಡೆದು ಸದಸ್ಯರೇ ಪಕ್ಷದ ನಾಯಕತ್ವ ಆಯ್ಕೆ ಮಾಡುತ್ತಾರೆ. ಆದರೆ, ಬೇರೆಲ್ಲಾ ಪಕ್ಷದಲ್ಲಿ ಅದರ ಹೈಕಮಾಂಡ್ ನಿರ್ಧರಿಸುತ್ತಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸಿ.ಪಿ.ಎಂ. ರಾಜ್ಯ ಕಂಟ್ರೋಲ್ ಕಮಿಟಿ ಅಧ್ಯಕ್ಷರಾದ ಕೆ. ಶಂಕರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಿ.ಪಿ.ಎಂ.ನ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಯಾದವ ಶೆಟ್ಟಿ ಮಾತನಾಡಿ; ಜನರ ಧಾರ್ಮಿಕ ಭಾವನೆಗಳನ್ನು ಬಿಜೆಪಿ ರಾಜಕೀಯಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಆದರೆ ಸಿಪಿಎಂ ಪಕ್ಷ ನಿವೇಶನ ಇಲ್ಲದವರ, ಸಂಬಳವಿಲ್ಲದ ಅಕ್ಷರ ದಾಸೋಹ ನೌಕರರ ಪರ,ಆಟೋ ,ಅಂಗನವಾಡಿ ನೌಕರರ ಸಮಸ್ಯೆಗಳ ಬಗ್ಗೆ, ಉದ್ಯೋಗ ಖಾತ್ರಿ ಕೂಲಿ ಮಾಡುವವರ ಕೂಲಿ ಬಗ್ಗೆ, ಬೀಡಿ, ಕಟ್ಟಡ ಕಾರ್ಮಿಕರ ಪರ ಮಾತನಾಡಿ ಹೋರಾಟ ನಡೆಸುವ ಏಕೈಕ ಪಕ್ಷ ಸಿಪಿಎಂ ಪಕ್ಷವಾಗಿದೆ ಎಂದರು. ಸಿ.ಪಿಎಂ. ಜಿಲ್ಲಾ ಸಮ್ಮೇಳನದ ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಕಾರಿ ವೈದ್ಯಕೀಯ ಕಾಲೇಜಿಗೆ ಆಗ್ರಹಿಸಿ ನಿರ್ಣಯ ಅಂಗೀಕರಿಸಿತು.
ವೇದಿಕೆಯಲ್ಲಿ ಜಿಲ್ಲಾ ಸಮಿತಿ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಸ್ವಾಗತ ಸಮಿತಿ ಕಾರ್ಯದರ್ಶಿ ರಾಜೀವ ಪಡುಕೋಣೆ, ಸ್ವಾಗತ ಸಮಿತಿ ಕೋಶಾಧಿಕಾರಿ ನಾಗರತ್ನ ನಾಡ, ಸಿ.ಪಿ.ಎಂ. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಎಚ್. ನರಸಿಂಹ, ಸುರೇಶ್ ಕಲ್ಲಾಗರ, ಚಂದ್ರಶೇಖರ ಉಪಸ್ಥಿತರಿದ್ದರು. ರಾಜೀವ ಪಡುಕೋಣೆ ಸ್ವಾಗತಿಸಿ, ಶ್ರೀಧರ ನಾಡಾ ಕಾರ್ಯಕ್ರಮ ನಿರೂಪಿಸಿ, ನಾಗರತ್ನ ನಾಡಾ ವಂದಿಸಿದರು.