ಕುಂದಾಪುರದ , ಡಿ.09(DaijiworldNews/AK): ಮಂಗಳೂರಿನಿಂದ ಕಾರವಾರ ಪ್ರಯಾಣಿಸುವ ರೈಲ್ವೆ ಹಳಿಗಳನ್ನು ದ್ವಿಪತಗೊಳಿಸುವುದು ಮತ್ತು ಭಾರತೀಯ ರೈಲ್ವೆ ಹಾಗೂ ಕೊಂಕಣ ರೈಲ್ವೆ ಯನ್ನು ವಿಲೀನಗೊಳಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.

ಕುಂದಾಪುರದ ಮೂಡ್ಲುಕಟ್ಟೆ ರೈಲ್ವೆ ನಿಲ್ದಾಣದಲ್ಲಿ ಮಂಗಳೂರು ಲಯನ್ಸ್ ಕ್ಲಬ್ ವತಿಯಿಂದ ಸುಮಾರು 50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ರೈಲ್ವೆ ಪ್ಲಾಟ್ ಫಾರ್ಮ್ ನೆಲಹಾಸು ಮತ್ತು ಮೇಲ್ಚಾವಣಿ ಕಾಮಗಾರಿಯ ಶಿಲನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಈಗಾಗಲೇ ಕೊಂಕಣ ರೈಲ್ವೆ ಯನ್ನ ಭಾರತೀಯ ರೈಲ್ವೆ ಜೊತೆ ವಿಲೀನಗೊಳಿಸುವ ಬಗ್ಗೆ ರೈಲ್ವೆ ಸಚಿವರ ಜೊತೆಗೆ ಮಾತುಕತೆ ನಡೆಸಲಾಗಿದೆ ಆದರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ನಡುವಿನ ಕೆಲವು ತೀರ್ಮಾನಗಳು ಬಾಕಿ ಇರುವುದರಿಂದ ವಿಳಂಬವಾಗುತ್ತಿದೆ ಈ ಬಗ್ಗೆ ಗಮನಹರಿಸಿ ರಾಜ್ಯ ಸರ್ಕಾರ ಮನಸ್ಸು ಮಾಡಿದರೆ ಕರಾವಳಿ ತೀರದ ಜನರಿಗೆ ವಾಣಿಜ್ಯೀಕರಣ ರೀತಿಯಲ್ಲಿ ಅಭಿವೃದ್ಧಿ ಹೊಂದಲು ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಲಯನ್ಸ್ ಕ್ಲಬ್ ಹಂಗಳೂರು ಇವರ ಸಾಧನೆಯನ್ನು ಮೆಚ್ಚಿಕೊಂಡ ಸಂಸದ ಕೋಟ ಶ್ರೀನಿವಾಸ ಪೂಜಾರಿ ಲಯನ್ಸ್ ಕ್ಲಬ್ಬಿನಿಂದ ಇನ್ನಷ್ಟು ಉತ್ತಮ ಕಾರ್ಯಕ್ರಮಗಳು ನಡೆಯಲಿ ಎಂದು ಶುಭ ಹಾರೈಸಿದರು.
ಲಯನ್ಸ್ ಜಿಲ್ಲೆ 317ಸಿ ಗವರ್ನರ್ ಮೊಹಮ್ಮದ್ ಹನೀಫ್ ಮಾತನಾಡಿ, ಕುಂದಾಪುರ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ ತೀರ ಹೆಚ್ಚಾಗಿದ್ದು ರೈಲು ಭೋಗಿಗಳಿಗೆ ಹತ್ತಲು ಮತ್ತು ಇಳಿಯಲು ಬಹಳಷ್ಟು ಅನಾನುಕೂಲವಾಗುತ್ತಿರುವುದನ್ನು ಮನಗಂಡು ಈ ಕಾರ್ಯಕ್ರಮಕ್ಕೆ ಮುಂದಾಗಿರುವುದಾಗಿ ತಿಳಿಸಿದರು.
ಲಯನ್ಸ್ ಉಪಜಿಲ್ಲಾ ಗವರ್ನರ್ ಸಪ್ನಾ ಸುರೇಶ್, ಲಯನ್ಸ್ ಕ್ಲಬ್ ಹಂಗಳೂರು ಅಧ್ಯಕ್ಷ ರೋವನ್ ಡಿ ಕಾಸ್ಟಾ, ಕೊಂಕಣ ರೈಲ್ವೆ ಪ್ರಾದೇಶಿಕ ಅಧಿಕಾರಿ ಆಶಾ ಶೆಟ್ಟಿ, ರೈಲು ಪ್ರಯಾಣಿಕರ ಹಿತರಕ್ಷಣ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್, ವಿವೇಕ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.