ಮಂಗಳೂರು, ಡಿ.09(DaijiworldNews/AK):ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆಯು ತನ್ನ ವ್ಯವಹಾರವನ್ನು ರಾಜ್ಯ ಮಟ್ಟಕ್ಕೆ ವಿಸ್ತರಿಸಲು ಯೋಜನೆ ರೂಪಿಸಿದ್ದು, ರಾಜ್ಯದ ಪ್ರತಿ ತಾಲೂಕಿನಲ್ಲಿ ವಿತರಣಾ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಿದೆ.ಸಂಸ್ಥೆಯು ಈಗಾಗಲೇ ಹಲವು ಉತ್ಪನ್ನಗಳನ್ನು ಅಭಿವೃದ್ಧಿ ಪಡಿಸಿ, ತನ್ನ ಉತ್ಪಾದನಾ ಘಟಕವನ್ನು ವಿಸ್ತರಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಸಂಸ್ಥೆಯ ಉತ್ಪನ್ನಗಳ ಮಾರುಕಟ್ಟೆ ವಿಸ್ತರಿಸುವ ಉದ್ದೇಶದಿಂದ ೨೪೭ ಫ್ರ್ಯಾಂಚೈಸಿ ತೆರೆಯಲು ಅವಕಾಶವನ್ನು ಸಂಸ್ಥೆಯು ಕಲ್ಪಿಸುತ್ತಿದೆ. ಈ ಮೂಲಕ ಆಸಕ್ತರಿಗೆ ಸ್ವ ಉದ್ಯಮ ಘಟಕ ಆರಂಭಿಸಲು ಅವಕಾಶ ನೀಡುತ್ತಿದೆ. ಹೂಡಿಕೆದಾರರು, ಸ್ವಸಹಾಯ ಸಂಘ ಸೇರಿದಂತೆ ಸಂಘ ಸಂಸ್ಥೆಗಳು ಫ್ರ್ಯಾಂಚೈಸಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆಯುಅಧ್ಯಕ್ಷರು ಕುಸುಮಾಧರ ಎಸ್.ಕೆ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ, ರೈತರಿಂದಲೇ ಸ್ಥಾಪಿತವಾದ ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆಯು, ತೆಂಗು ಬೆಳೆ ಮತ್ತು ಅದರಎಲ್ಲಾ ಭಾಗಗಳನ್ನು ಮೌಲ್ಯವರ್ಧಿಸಿ, ಮಾರುಕಟ್ಟೆಯಲ್ಲಿ ಬೇಡಿಕೆಯಿರುವ ಉತ್ಪನ್ನಗಳನ್ನಾಗಿ ಪರಿವರ್ತಿಸಿ,ರೈತರಿಂದ ಗ್ರಾಹಕರಿಗೆ ತಲುಪಿಸುವ ಪ್ರಕ್ರಿಯೆಯನ್ನು ವೈಜ್ಞಾನಿಕವಾಗಿ ವ್ಯವಸ್ಥಿತವಾಗಿ ನಿರ್ವಹಿಸುತ್ತಿದೆ. ಕೃಷಿಯೇ ದೇಶದ ಬೆನ್ನೆಲುಬು. ಕೃಷಿ ಉತ್ಪನ್ನಗಳು ಹಲವು ಕೈಗಾರಿಕೆಗಳಿಗೆ ಕಚ್ಚಾ ವಸ್ತುಗಳನ್ನು ಪೂರೈಸುತ್ತಿದೆ. ಕೃಷಿಯಿಂದಲೇ ಬದುಕು ಕಂಡುಕೊಂಡ ರೈತರು, ಕೃಷಿಯಿಂದ ವಿಮುಖರಾಗುವುದು ದೇಶದ ಅಭಿವೃದ್ಧಿಗೆ ಮಾರಕ.
ಕೃಷಿ ಕ್ಷೇತ್ರಕ್ಕೆ ಮತ್ತೆ ಉತ್ತೇಜನ ನೀಡುವ ಅವಶ್ಯಕತೆ ಬಂದಿದೆ. ಕೃಷಿಯಿಂದಲೇ ಭವಿಷ್ಯವಿದೆ ಎಂಬ ಸತ್ಯವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಕೃಷಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸಂಸ್ಥೆಯು ತೆಂಗಿನ ನಾನಾ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿ, ಮಾರುಕಟ್ಟೆ ಕಲ್ಪಿಸುತ್ತಿದೆ ಎಂದರು.
ರೈತರಿಂದ ತೆಂಗಿನಕಾಯಿಗಳನ್ನು ನೇರವಾಗಿ ಸ್ಪರ್ಧಾತ್ಮಕ ದರದಲ್ಲಿ ಖರೀದಿಸಿ, ಪ್ರತಿಷ್ಠಿತ CPCRI (ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ) ಅನುಮೋದಿತ ತಂತ್ರಜ್ಞಾನದ ಮೂಲಕ ಮೌಲ್ಯವರ್ಧನೆ ಮಾಡಿ, ತೆಂಗಿನ ಗರಿಯಿಂದ ಬೇರಿನ ವರೆಗೂ ಎಲ್ಲ ಭಾಗಗಳನ್ನು ಮೌಲ್ಯವರ್ಧಿತ ಉತ್ಪನ್ನವಾಗಿ ತಯಾರಿಸುತ್ತಿದೆ. ತೆಂಗು ಕೃಷಿಯ ಅಪರಿಮಿತ ಪ್ರಯೋಜನವನ್ನು ರೈತರ ಜೊತೆಗೆ ಜನಸಾಮಾನ್ಯರಿಗೂ ತಲುಪಿಸುವ ದೂರದೃಷ್ಟಿಯಿಂದ, ದೇಶದಲ್ಲೇ ಮಾದರಿಯಾಗಬಲ್ಲ ರೈತರ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ.
ತೆಂಗಿನಕಾಯಿ ಮತ್ತು ಅದರ ಉಪ-ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿದ್ದು, ಆರೋಗ್ಯ ದೃಷ್ಟಿಯಿಂದಲೂ ಅವು ಬಹಳ ಪ್ರಾಮುಖ್ಯತೆ ಪಡೆದಿವೆ. ಕರ್ನಾಟಕದಾದ್ಯಂತ ಸಂಸ್ಥೆಯ ಉತ್ಪನ್ನಗಳ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕ್ಲಪ್ತ ಸಮಯದಲ್ಲಿ ಉತ್ಪನ್ನಗಳನ್ನು ಸ್ಥಳೀಯ ಮಾರುಕಟ್ಟೆ/ಅಂಗಡಿಗಳಿಗೆ ಪೂರೈಸಲು
ಪ್ರತಿ ತಾಲ್ಲೂಕಿಗೆ ಒಂದರಂತೆ ರೈತ ಸಂಸ್ಥೆಯ ವಿತರಣಾ ಕೇಂದ್ರದ ಪರವಾನಗಿಯನ್ನು ನೀಡಲು ನಿರ್ಧರಿಸಲಾಗಿದೆ.ಪದವೀಧರರು ಅಥವಾ ಕೃಷಿ ಕುಟುಂಬದ ಸದಸ್ಯರು, ಸ್ವ-ಸಹಾಯ ಸಂಘ, ಕೃಷಿ ಸಂಸ್ಥೆ, ಸಹಕಾರಿ ಸಂಘಗಳಿಗೂ ಅವಕಾಶ ಕಲ್ಪಿಸಲಾಗಿದೆ. ಒಬ್ಬರಿಗೆ ಒಂದು ಪರವಾನಗಿ ಪಡೆಯಲು ಅವಕಾಶವಿದೆ.
ತೆಂಗಿನ ಐಸ್ಕ್ರೀಮ್, ತೆಂಗಿನ ಹಾಲಿನಿಂದ ತಯಾರಿಸಿದ ಜ್ಯೂಸ್, ತೆಂಗಿನ ಎಣ್ಣೆ, ಗೊಬ್ಬರಗಳು, ಟರ್ಪಾಲಿನ್ ಉತ್ಪನ್ನಗಳು, ತೆಂಗಿನ ಮರದ ಪೀಠೋಪಕರಣಗಳು ಸೇರಿದಂತೆ 32ಕ್ಕೂ ಹೆಚ್ಚು ಉತ್ಪನ್ನಗಳು ಹಾಗೂ 24 ವಿವಿಧ ತಳಿಯ ತೆಂಗಿನ ಸಸಿಗಳು ಈ ಕೇಂದ್ರದಲ್ಲಿ ದೊರೆಯಲಿವೆ.
ಸಂಸ್ಥೆಯಿಂದ ಅರ್ಜಿಯನ್ನು ಪಡೆದು, ಭರ್ತಿ ಮಾಡಿ ಕೆವೈಸಿ ಜೊತೆಗೆ 65 ಸಾವಿರ DD / Cheque /ಬ್ಯಾಂಕ್ ಟ್ರಾನ್ಸ್ಫರ್ ದಾಖಲೆಯನ್ನು ಲಗತ್ತಿಸಿ, ಸಂಸ್ಥೆಯ ಪ್ರಾದೇಶಿಕ ಕಛೇರಿಗೆ ಕಳುಹಿಸಬೇಕು. ಆಯ್ಕೆಯಾದ ಅರ್ಜಿಯನ್ನು ಹೊರತು ಪಡಿಸಿ ಇತರ ಅರ್ಜಿದಾರರ ಸಂಪೂರ್ಣ ಹಣವನ್ನು ಹಿಂತಿರುಗಿಸಲಾಗುವುದು.
ಆಯ್ಕೆಯಾದ ಅರ್ಜಿದಾರಿಗೆ ಉತ್ಪನ್ನಗಳ ಬಗ್ಗೆ ಮಾಹಿತಿ, ಬಳಕೆಯ ಪ್ರಕ್ರಿಯೆ, ಬಿಲ್ಲಿಂಗ್, ಡಿಜಿಟಲ್ ಉಪಕರಣಗಳ ಬಳಕೆಯ ಮಾಹಿತಿ, ವ್ಯವಹಾರ ಕುರಿತ ಸಲಹೆ ಮತ್ತು ತರಬೇತಿಗಳನ್ನು ಮಾತ್ರವಲ್ಲದೆ ರಾಷ್ಟ್ರೀಕೃತ ಬ್ಯಾಂಕ್ ಮೂಲಕ ವ್ಯವಹಾರಕ್ಕೆ ಬೇಕಾದ ಹಣಕಾಸಿನ ಬೆಂಬಲವನ್ನು ನೀಡಲಾಗುವುದು.
ಸಂಸ್ಥೆಯು ನಿಗದಿಪಡಿಸಿದ ದರದಂತೆ ಉತ್ಪನ್ನಗಳ ಮಾರಾಟದಿಂದ ಉತ್ತಮ ಲಾಭಾಂಶ ದೊರೆಯುತ್ತದೆ. ಇದಲ್ಲದೆ, ಸಂಸ್ಥೆಯ ವಿವಿಧ ಯೋಜನೆಗಳ ಮೂಲಕ ಇತರ ಆದಾಯಗಳನ್ನು ಗಳಿಸಬಹುದು.
ಮೌಲ್ಯಾಧಾರಿತ ವ್ಯವಸ್ಥೆಗಳ ಮೂಲಕ ಬೇಡಿಕೆ ಪೂರೈಸುವುದರ ಜೊತೆಗೆ, ಸುಸ್ಥಿರ ಮತ್ತು ಸಮೃದ್ಧ ತೆಂಗಿನ ಉದ್ಯಮವನ್ನು ರಾಜ್ಯಾದ್ಯಂತ ವಿಸ್ತರಿಸುವ ಗುರಿಯನ್ನು ಸಂಸ್ಥೆ ಹೊಂದಿದೆ. ತೆಂಗು ಕೃಷಿಕರ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಯ ಮೂಲಕ ಸ್ವಾವಲಂಬಿ ಜೀವನಕ್ಕೆ ಪ್ರೋತ್ಸಾಹ ನೀಡುತ್ತಿದೆ. ಈಗಾಗಲೇ 22,241 ಹೆಕ್ಟೇರ್ ಪ್ರದೇಶದಲ್ಲಿ 2೦ ಸಾವಿರಕ್ಕೂ ಹೆಚ್ಚು ತೆಂಗು ಬೆಳೆಗಾರರು ಮತ್ತು 1೦ ಲಕ್ಷಕ್ಕೂ ಹೆಚ್ಚು ತೆಂಗಿನ ಮರಗಳುನೋಂದಾಯಿಸಲ್ಪಟ್ಟಿವೆ.
ಸಂಸ್ಥೆಯ 'ಕಲ್ಪವಿಕಾಸ' ಯೋಜನೆಯಡಿ ತರಬೇತಿ ಪಡೆದ ಮಹಿಳೆಯರು ತೆಂಗಿನ ಗೆರಟೆ ಮತ್ತು ತೆಂಗಿನಮರದಿಂದ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ, ತಿಂಗಳಿಗೆ ಸುಮಾರು ೩೦ ಸಾವಿರ ರೂ. ವರೆಗೆ ಆದಾಯಗಳಿಸುತ್ತಿದ್ದಾರೆ. ಉತ್ಪನ್ನಗಳ ಬೇಡಿಕೆಯನ್ನು ಪೂರೈಸಲು ಸದ್ಯದಲ್ಲೇ ಗುಡಿ ಕೈಗಾರಿಕೆಯಿಂದ ಅತ್ಯಾಧುನಿಕ
ತಂತ್ರಜ್ಞಾನದ ಫ್ಯಾಕ್ಟರಿಯನ್ನು ಸ್ಥಾಪಿಸುವ ಯೋಜನೆ ಕಾರ್ಯರೂಪದಲ್ಲಿದೆ.
ಸಂಪರ್ಕ ಮಾಹಿತಿ:
ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆ
ಸೂರ್ಯ ನಾರಾಯಣ ದೇವಸ್ಥಾನದ ಹತ್ತಿರ, ಮರೋಳಿ, ಮಂಗಳೂರು, ಕರ್ನಾಟಕ - 575005
ದೂರವಾಣಿ: 8105487763
ಟೋಲ್ ಫ್ರೀ: 18002030129
ಇಮೇಲ್: contact@coconutfarmers.in
ವೆಬ್ಸೈಟ್: www.coconutfarmers.in