ಕುಂದಾಪುರ, ಡಿ.09(DaijiworldNews/AA): ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ವಹಿಸಿಕೊಂಡಾಗಲಿಂದ ನಮ್ಮ ಸಮುದಾಯದ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ, ಸರ್ಕಾರಿ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿ, ಬಂಡಾವಳಶಾಹಿ ಧೋರಣೆಯನ್ನು ಪೋಷಿಸುತ್ತಿದೆ. ದೇಶದಾದ್ಯಂತ ಬಿಜೆಪಿ ಸರ್ಕಾರದ ಆಡಳಿತದಲ್ಲಿ ದಲಿತರ ಮೇಲೆ ದೌರ್ಜನ್ಯ ನಿರಂತವಾಗಿ ನಡೆಯುತ್ತಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಸಂಘಟನೆಯ ರಾಜ್ಯ ಸಂಚಾಲಕ ಸುಂದರ್ ಮಾಸ್ತರ್ ಹೇಳಿದರು.






ಇಂದು ಕುಂದಾಪುರದ ಅಂಬೇಡ್ಕರ್ ಭವನದಲ್ಲಿ ನಡೆದ ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ.) ಅಂಬೇಡ್ಕರ್ ವಾದ, ಜಿಲ್ಲಾ ಸಮಿತಿ, ಉಡುಪಿಯ ಕುಂದಾಪುರ ತಾಲೂಕು ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ, ನವಚೇತನ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿ ಸರ್ಕಾರ ಸಂವಿಧಾನವನ್ನೇ ತೆಗೆದುಹಾಕುವ ಕೆಲಸ ನಡೆಯುತ್ತಿದೆ. ಕೆಲವು ಮಠಾಧೀಶರೂ ಕೂಡ ಸಂವಿಧಾನ ಬದಲಾವಣೆಯಾಗಬೇಕೆಂದು ಹೇಳುತ್ತಿರುವುದು ದುರಂತ. ಪೇಜಾವರ ಮಠದ ಸ್ವಾಮೀಜಿಗಳು ಸಂವಿಧಾನದ ಬದಲಾವಣೆಯ ಹೇಳಿಕೆಗಳನ್ನು ನೀಡುವ ಮೂಲಕ ಸಮಾಜದಲ್ಲಿ ಮೇಲು ಕೀಳು ಭಾವವನ್ನು ಚಾಲ್ತಿಯಲ್ಲಿಡುವ ಪ್ರಯತ್ನ ಮಾಡಿದ್ದಾರೆ. ಬಿಜೆಪಿ ಸರ್ಕಾರ 'ಮನು ಸಂವಿಧಾನ' ಜಾರಿಗೆ ತರುವ ಪ್ರಯತ್ನ ಮಾಡುತ್ತಿದೆ. ಇಂತಹ ಸವಾಲುಗಳನ್ನು ಎದುರಿಸಲು ನಮ್ಮ ಚಳುವಳಿ ಇನ್ನಷ್ಟು ಬಲವಾಗಬೇಕಿದೆ ಎಂದು ಅವರು ತಿಳಿಸಿದರು.
ದೇಶದಲ್ಲಿ ಜಾತ್ಯಾತೀತ ಮನೋಭಾವ ಉಳಿಯಬೇಕಾದರೇ ಸಂಘಟನಾ ಶಕ್ತಿ ಬೆಳೆಯಬೇಕು. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆದರ್ಶಗಳನ್ನು ಪೂರ್ಣವಾಗಿ ಪಾಲಿಸಿ, ಬೆಳೆಸುವ ತುರ್ತಿದೆ ಎಂದರು.
ಅAಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ಬಳಿಕ ಕುಂದಾಪುರದ ಉಪ ವಿಭಾಗಾಧಿಕಾರಿ ಮಹೇಶ್ಚಂದ್ರ ಮಾತನಾಡಿ, ಅಂಬೇಡ್ಕರ್ ಎಂದಾಕ್ಷಣ ಕಾನೂನು ನೆನಪಿಗೆ ಬರುತ್ತದೆ. ಇಂತಹ ದಲಿತ ಚಳುವಳಿಯ ಕಾರಣದಿಂದ ಅಂಬೇಡ್ಕರ್ ವಾದ ಜೀವಂತವಾಗಿದೆ. ತಾಲೂಕು ಆಡಳಿತ ಮಟ್ಟದಲ್ಲಿ ಆಗುವ ಸಮುದಾಯದ ಎಲ್ಲಾ ಬೇಡಿಕೆಗಳನ್ನು ಪೂರೈಸುವಲ್ಲಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ದಸಂಸ ತಾಲೂಕು ಸಮಿತಿಯಿಂದ ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ದಲಿತ ಸಮುದಾಯದ ಜನರಿಗೆ ನಿವೇಶನ ಹಕ್ಕುಪತ್ರ ಒದಗಿಸುವಂತೆ ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ ಮೊಳಹಳ್ಳಿ ಮಾತನಾಡಿ, ಇಡೀ ದೇಶ ನಡೆಯುವುದೇ ಅಂಬೇಡ್ಕರ್ ರಚಿಸಿರುವ ಸಂವಿಧಾನದ ಆಶಯದ ಮೂಲಕ. ಸಮಾಜದ ಕಟ್ಟಕಡೆಯ ವ್ಯಕ್ತಿಯೊಬ್ಬ ಮುನ್ನೆಲೆಗೆ ಬರುವಂತೆ ಮಾಡಿ, ತನಗೂ ಹಕ್ಕಿದೆ ಎಂದು ಹೇಳುವಂತೆ ಮಾಡಿರುವ ಕೀರ್ತಿ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಸ್ವಾತಂತ್ರ್ಯಾನಂತರ ಅಂಬೇಡ್ಕರ್ ಚಿಂತನೆಗಳನ್ನು ಜೀವಂತವಾಗಿಟ್ಟುಕೊಳ್ಳವಲ್ಲಿ ದಲಿತ ಚಳವಳಿ ಸಫಲವಾಗಿದೆ ಎಂದು ಅವರು ಹೇಳಿದರು.
ಇನ್ನು, ಇದೇ ಸಂದರ್ಭದಲ್ಲಿ ತಾಲೂಕು ಸಮಿತಿಯ ಪ್ರಧಾನ ಸಂಚಾಲಕರಾಗಿ ಕೆ.ಸಿ ರಾಜು ಬೆಟ್ಟಿನಮನೆ, ಕೋಶಾಧಿಕಾರಿಯಾಗಿ ಚಂದ್ರ ಕೊರ್ಗಿ ಸೇರಿ ಸಂಘಟನಾ ಸಂಘಟನಾ ಸಂಚಾಲಕರು, ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ಮಹಿಳಾ ಒಕ್ಕೂಟದ ಪ್ರಧಾನ ಸಂಚಾಲಕಿಯಾಗಿ ಶ್ರೀಮತಿ ಕುಸುಮ, ಕೋಶಾಧಿಕಾರಿಯಾಗಿ ಸುನೀತಾ ಕುಂದಾಪುರ ಸೇರಿ ಸಂಘಟನಾ ಸಂಚಾಲಕರು, ಕಾರ್ಯಕಾರಿ ಸಮಿತಿ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು.
ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮಸುಂದರ್ ತೆಕ್ಕಟ್ಟೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಸಂಚಾಲಕ ಟಿ. ಮಂಜುನಾಥ ಗಿಳಿಯಾರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಿಲ್ಲಾ ಸಂಘಟನಾ ಸಂಚಾಲಕ ಸುರೇಶ್ ಹಕ್ಲಾಡಿ ಪ್ರಮಾಣ ವಚನ ಬೋಧಿಸಿದರು.
ಜಿಲ್ಲಾ ಸಂಘಟನಾ ಸಂಚಾಲಕ ಮಂಜುನಾಥ್ ನಾಗೂರು, ಮಹಿಳಾ ಒಕ್ಕೂಟದ ಗೀತಾ ಸುರೇಶ್ ಕುಮಾರ್, ನಯನಾ ಆದೀಶ್, ಬೈಂದೂರು ತಾಲೂಕು ಸಂಚಾಲಕ ಶಿವರಾಜ್ ಬೈಂದೂರು, ಜಿಲ್ಲಾ ಸಮಿತಿಯ ಸದಸ್ಯರುಗಳಾದ ರಮೇಶ್ ಮರವಂತೆ, ಸುರೇಶ್ ಬಾರ್ಕೂರು, ಕರುಣಾಕರ ಕಿರಿಮಂಜೇಶ್ವರ, ಕುಮಾರ್ ಕೋಟ, ಭಾಸ್ಕರ ಕೆರ್ಗಾಲ್ ಮತ್ತು ಗ್ರಾಮ ಶಾಖೆಯ ಸಂಚಾಲಕರು ಸೇರಿ ಮೊದಲಾದವರು ಇದ್ದರು.
ಶಂಭು ಗುಡ್ಡಮ್ಮಾಡಿ ಹಾಗೂ ಚೈತ್ರಾ ಯಡ್ತರೆ ಕಾರ್ಯಕ್ರಮ ನಿರ್ವಹಿಸಿದರು. ರವಿ ಬನ್ನಾಡಿ ಹಾಗೂ ಇತರರು ಹೋರಾಟದ ಹಾಡುಗಳನ್ನು ಹಾಡಿದರು.