ಕಾರ್ಕಳ, ಡಿ.10(DaijiworldNews/AA): ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಒಂದಾಗಿರುವ ಬೆಳ್ತಂಗಡಿ ತಾಲೂಕು ಕುತ್ಲೂರು ಗ್ರಾಮದ ಹೌತೊಟ್ಟು ಎಂಬಲ್ಲಿ ಕಡವೆ ಜಾತಿಯ ವನ್ಯ ಪ್ರಾಣಿಯನ್ನು ಭೇಟೆಯಾಡಿ, ಮಾಂಸ ತಯಾರಿಸಿ ದಾಸ್ತಾನು ಇರಿಸಿದ ಪ್ರಕರಣವನ್ನು ಪತ್ತೆ ಹಚ್ಚಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಬ್ಬರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.


ಸಂದೇಶ್ ಪೂಜಾರಿ(49), ರಾಧಾಕೃಷ್ಣ(47) ಪ್ರಕರಣದ ಆರೋಪಿಗಳಾಗಿದ್ದು, ಇಬ್ಬರೂ ತಲೆಮರೆಸಿಕೊಂಡಿದ್ದಾರೆ.
ಮಂಗಳೂರು ಅರಣ್ಯ ಸಂಚಾರಿದಳಕ್ಕೆ ಬಂದಿದ್ದ ಖಚಿತ ಮಾಹಿತಿಯನ್ವಯ ಕಾರ್ಯಚರಣೆ ನಡೆದಿದೆ. ವೇಣೂರು ಅರಣ್ಯಧಿಕಾರಿ ಸುಬ್ರಹ್ಮಣ್ಯ ಆಚಾರ್ ನೇತೃತ್ವದಲ್ಲಿ ಅರಣ್ಯ ಸಿಬ್ಬಂದಿಗಳು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದು, ಆರೋಪಿಗಳಿಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆಯ ವಿವರ
ಈ ಪ್ರಕರಣ 2024 ಅಕ್ಟೋಬರ್ 28ರಂದು ನಡೆದಿದೆ. ಮಂಗಳೂರು ಅರಣ್ಯ ಸಂಚಾರಿದಳಕ್ಕೆ ಬಂದಿದ್ದ ಖಚಿತ ಮಾಹಿತಿಯನ್ವಯ ಕಾರ್ಯಚರಣೆ ನಡೆದಿದೆ.
ಕುತ್ಲೂರು ಗ್ರಾಮದ ಮಂಜುಶ್ರೀ ನಗರದಿಂದ ಹೌತೊಟ್ಟು ಕಡೆಗೆ ಹೋಗುವ ಡಾಂಬರು ರಸ್ತೆಯಿಂದ ಸಮಾರು 3 ಕಿ.ಮೀ ದೂರದಲ್ಲಿ ಇರುವ ಸಂದೇಶ್ ಪೂಜಾರಿಯ ಮನೆಯಲ್ಲಿ ಅಡುಗೆ ಕೋಣೆಯಲ್ಲಿ ಫಿಡ್ಜ್ ನಲ್ಲಿ ಇರಿಸಲಾಗಿದ್ದ ಪ್ಲಾಸ್ಟಿಕ್ ಕವರ್ನಲ್ಲಿ ಮುಚ್ಚಿಡಲಾಗಿದ್ದ ಕಡವೆ ಜಾತಿಯ ವನ್ಯಪ್ರಾಣಿಯ 1 ಕೆ.ಜಿ ಮಾಂಸ ಪತ್ತೆಯಾಗಿತ್ತು. ಮನೆಯ ಹೊರಗಡೆ ನಿಲ್ಲಿಸಲಾಗಿದ್ದ ಹೊಂಡಾ ಡಿಯೋ ದ್ವಿಚಕ್ರವಾಹನವನ್ನು ಪರಿಶೀಲನೆ ನಡೆಸಿದಾಗ ಅದರ ಮ್ಯಾಟ್ನಲ್ಲಿ ರಕ್ತದ ಕಲೆಗಳು ಹಾಗೂ ವನ್ಯಪ್ರಾಣಿಯ ಕೂದಲು ಪತ್ತೆಯಾಗಿದ್ದವು. ಮನೆಯಂಗಳದಲ್ಲಿ ಕಪ್ಪು ಬಣ್ಣದ ಟಪ್ಪಾಲ್ವೊಂದು ಕಂಡುಬಂದಿದ್ದು, ಅದರಲ್ಲಿ ರಕ್ತದ ಕಲೆಗಳು ಪತ್ತೆಯಾಗಿದ್ದವು.
ಅದೇ ಗ್ರಾಮದ ಸ್ವಸ್ತಿಕ್ ನಿಲಯದ ರಾಧಾಕೃಷ್ಣ ಪೂಜಾರಿ ಎಂಬವರ ಮನೆಗೆ ಇದೇ ಸಂದರ್ಭದಲ್ಲಿ ಮಂಗಳೂರು ಅರಣ್ಯ ಸಂಚಾರಿದಳ, ವೇಣೂರು ಅರಣ್ಯಧಿಕಾರಿ ಸುಬ್ರಹ್ಮಣ್ಯ ಆಚಾರ್ ನೇತೃತ್ವದಲ್ಲಿ ಅರಣ್ಯ ಸಿಬ್ಬಂದಿಯರು ದಾಳಿ ನಡೆಸಿದ್ದಾರೆ. ಕಡವೆ ಜಾತಿಯ ವನ್ಯಪ್ರಾಣಿಯನ್ನು ಭೇಟಿಯಾಡಿ ಮಾಂಸವನ್ನು ತಯಾರಿಸಿ ಬಳಿಕ ಬೇಯಿಸಿ ಆಹಾರ ಪದಾರ್ಥವನ್ನಾಗಿ ಮಾಡಿದ ಪ್ರಕರಣವನ್ನು ಪತ್ತೆ ಹಚ್ಚಲಾಗಿದೆ. ಕುಕ್ಕರ್ನಲ್ಲಿ ಬೇಯಿಸಿಟ್ಟ 4.5 ಕೆ.ಜಿ ಕಡವೆ ಜಾತಿಯ ವನ್ಯಪ್ರಾಣಿಯ ಮಾಂಸ ಅದಾಗಿರುತ್ತದೆ ಎಂದು ತಿಳಿದುಬಂದಿದೆ.
ರಾಧಾಕೃಷ್ಣ ಪುಜಾರಿಯ ಸ್ನೇಹಿತನಾಗಿರುವ ಸಂದೇಶ್ ಪುಜಾರಿ ಕಡವೆ ಜಾತಿಯ ವನ್ಯ ಪ್ರಾಣಿಯನ್ನು ಭೇಟೆಯಾಡಿ ಅದರ ಮಾಂಸವನ್ನು ತಯಾರಿಸಿ ಅದನ್ನು ರಾಧಾಕೃಷ್ಣನಿಗೆ ನೀಡಿದನೆಂಬ ಅಂಶ ತನಿಖೆಯಿಂದ ಬಯಲಾಗಿದೆ. ಆರೋಪಿಗಳಿಬ್ಬರು ಸ್ಥಳದಿಂದ ಪರಾರಿಯಾಗಿದ್ದು, ಮನೆಮಂದಿಯ ಹೇಳಿಕೆಯನ್ನು ಆಧರಿಸಿ ಅರಣ್ಯ ಇಲಾಖಾಧಿಕಾರಿಗಳು ಈ ಬಗ್ಗೆ ವನ್ಯಜೀವಿ ಕಾಯ್ದೆಯನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಡವೆ ಜಾತಿಯ ವನ್ಯಪ್ರಾಣಿಯ ಮಾಂಸ ಹಾಗೂ ಪೂರಕವಾದ ಪರಿಕರಗಳನ್ನು ವಶಪಡಿಸಲಾಗಿದೆ.
ಪತ್ತೆಯಾದ ಮಾಂಸ, ಪರಿಕರಗಳು ಫೋರೆನಿಕ್ಸ್ ಲ್ಯಾಬ್ಗೆ
ಕುತ್ಲೂರು ಮನೆಗಳಲ್ಲಿ ಪತ್ತೆಯಾಗಿರುವ ಕಡವೆ ಜಾತಿಯ ವನ್ಯಪ್ರಾಣಿಯ ಮಾಂಸ ಹಾಗೂ ಇತರ ಪರಿಕರಗಳನ್ನು ಹೈದರಾಬಾದ್ ಫೋರೆನಿಕ್ಸ್ ಲ್ಯಾಬ್ಗೆ ಅರಣ್ಯ ಇಲಾಖೆ ಕಳುಹಿಸಿದೆ ಎಂಬ ಮಾಹಿತಿ ಲಭಿಸಿದೆ. ಅಲ್ಲಿಂದ ವರದಿ ಬಂದ ಬಳಿಕ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸುವ ಪ್ರಕ್ರಿಯೆ ನಡೆಯಲಿದೆ. ಈ ನಡುವೆ ಪ್ರಕರಣದ ಆರೋಪಿಗಳಾಗಿರುವ ಸಂದೇಶ್ ಪೂಜಾರಿ ಹಾಗೂ ರಾಧಾಕೃಷ್ಣ ಪೂಜಾರಿ ತಲೆಮರೆಸಿಕೊಂಡಿದ್ದಾರೆ.