ಮಂಗಳೂರು, ಡಿ.10(DaijiworldNews/AA): ಪಾರ್ಟ್ ಟೈಮ್ ಜಾಬ್ ಹೆಸರಲ್ಲಿ ವ್ಯಕ್ತಿಯೊಬ್ಬರಿಗೆ 28,18,065ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ನೀಲಸಂದ್ರ ನಿವಾಸಿ ಅಮೀರ್ ಸುಹೇಲ್ ಮತ್ತು ಜಮ್ಮು ಕಾಶ್ಮೀರದ ಅನಂತನಾಗ ಜಿಲ್ಲೆಯ ನಿವಾಸಿ ಸುಹೇಲ್ ಅಹ್ಮದ್ ವಾನಿ ಬಂಧಿತ ಆರೋಪಿಗಳು.
2024ರ ಜುಲೈ 21ರಂದು ಪಾರ್ಟ್ ಟೈಮ್ ಜಾಬ್ ನ ಬಗ್ಗೆ ದೂರುದಾರರಿಗೆ ಪೋನ್ ನಂಬರ್ಗೆ ವಾಟ್ಸಾಪ್ ಮೆಸೇಜ್ ಬಂದಿರುತ್ತದೆ. ಆರೋಪಿಗಳು ದೂರುದಾರರ ವಾಟ್ಸಾಪ್ ಗೆ ಟೆಲಿಗ್ರಾಮ್ ಆ್ಯಪ್ ನ ಲಿಂಕ್ ಕಳುಹಿಸಿ ಓಪನ್ ಮಾಡುವಂತೆ ತಿಳಿಸಿದ್ದಾರೆ. ಅದರಂತೆ ದೂರುದಾರರು ಟೆಲಿಗ್ರಾಮ್ ಆ್ಯಪ್ ಅನ್ನು ಓಪನ್ ಮಾಡಿದಾಗ ಟೆಲಿಗ್ರಾಮ್ ನಲ್ಲಿ ಪಾರ್ಟ್ ಟೈಮ್ ಜಾಬ್ ಏನೆಂದು ಕೇಳಿದಾಗ ಅವರಿಗೆ ಒಂದು ವಿಡಿಯೋ ಕಳುಹಿಸಿ ಅದನ್ನು ನೋಡಿ ಸ್ಕ್ರೀನ್ ಶಾಟ್ ನ್ನು ಕಳುಹಿಸುವಂತೆ ಹೇಳಿದ್ದಾರೆ.
ದೂರುದಾರರು ಅವರಿಗೆ ಸ್ಕ್ರೀನ್ ಶಾಟ್ ನ್ನು ಕಳುಹಿಸಿದ ತಕ್ಷಣ ಅವರ ಬ್ಯಾಂಕ್ ನ ಖಾತೆಗೆ 130ರೂ. ಹಾಕಿರುತ್ತಾರೆ. ನಂತರ ದೂರುದಾರರು ಹಾಕಿದ ವಿಡಿಯೋ ತಪ್ಪಾಗಿದೆ ಎಂದು ಹೇಳಿ ಅದನ್ನು ಸರಿ ಮಾಡಲು ಟೆಲಿಗ್ರಾಮ್ ಲಿಂಕ್ ನ್ನು ಕಳುಹಿಸಿದ್ದು, ಆ ಲಿಂಕ್ ಅನ್ನು ದೂರುದಾರರು ಓಪನ್ ಮಾಡಿದಾಗ ಆರೋಪಿಗಳು 1,000 ರೂ. ಮೊತ್ತವನ್ನು ಹಾಕಲು ಹೇಳಿದ್ದಾರೆ. ಅದರಂತೆ ದೂರುದಾರರು ತಮ್ಮ ಬ್ಯಾಂಕ್ ನ ಖಾತೆಯಿಂದ ಹಂತ ಹಂತವಾಗಿ ಆರೋಪಿಗಳು ನೀಡಿದ ಬೇರೆ ಬೇರೆ ಖಾತೆಗೆ ವರ್ಗಾಯಿಸಿರುತ್ತಾರೆ. ಆರೋಪಿಗಳು ದೂರುದಾರರನ್ನು ಹೆಚ್ಚು ಹಣವನ್ನು ಕೊಡುವುದಾಗಿ ನಂಬಿಸಿ ಮೋಸಮಾಡಿ ಒಟ್ಟು 28,18,065ರೂ. ಯನ್ನು ತಮ್ಮ ಖಾತೆಗೆ ಹಾಕಿಸಿಕೊಂಡಿರುತ್ತಾರೆ. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಐಟಿ ಕಾಯಿದೆಯಂತೆ ದುರು ದಾಖಲಾಗಿರುತ್ತದೆ.
ಈಗಾಗಲೇ ಈ ಪ್ರಕರಣಕದಲ್ಲಿ ಬೆಂಗಳೂರು, ಹಾಗೂ ಮೈಸೂರು ಮೂಲದ 5 ಆರೋಪಿಗಳನ್ನು ಬಂಧಿಸಿ ನ್ಯಾಯಲಯಕ್ಕೆ ಹಾಜರು ಪಡಿಸಲಾಗಿರುತ್ತದೆ. ಈ ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಇತರೆ ಆರೋಪಿಗಳ ಮಾಹಿತಿ ನೀಡಿದ್ದಾರೆ. ಆರೋಪಿಗಳಾದ ಅಮೀರ್ ಸುಹೇಲ್ ಮತ್ತು ಸುಹೇಲ್ ಅಹ್ಮದ್ ವಾನಿನನ್ನು ಜಮ್ಮು ಕಾಶ್ಮೀರದ ಕುಲ್ಗಮ್ ಬಳಿ ದಸ್ತಗಿರಿ ಮಾಡಿ ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.
ಮೂಲತಃ ಜಮ್ಮು ಕಾಶ್ಮೀರದವನಾದ ಆರೋಪಿ ಸುಹೇಲ್ ಅಹ್ಮದ್ ವಾನಿಗೆ ಬೆಂಗಳೂರಿನಲ್ಲಿ ಅಮೀರ್ ಸುಹೇಲ್ ಪರಿಚಯವಾಗಿರುತ್ತಾನೆ. ಈ ಇಬ್ಬರು ಆರೋಪಿಗಳು ಹಲವಾರು ಬ್ಯಾಂಕ್ ಗಳಲ್ಲಿ ಬೇರೆಯವರ ಹೆಸರಿನಲ್ಲಿ ಹಾಗೂ ತಮ್ಮ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ಮಾಡಿಸಿ ಕೊಟ್ಟಿರುವುದಾಗಿ ವಿಚಾರಣೆಯಲ್ಲಿ ತಿಳಿದುಬಂದಿರುತ್ತದೆ. ಇದೇ ರೀತಿ ಬೇರೆ ಬೇರೆ ಬ್ಯಾಂಕ್ ಖಾತೆ ಮಾಡಿಸಿಕೊಟ್ಟು ದಿನಕ್ಕೆ ಮೂರರಿಂದ ಐದು ಸಾವಿರ ಹಣಗಳಿಸುವ ಉದ್ದೇಶದಿಂದ ಬ್ಯಾಂಕ್ ಖಾತೆ ಮಾರಾಟ ಮಾಡಿರುವುದು ತನಿಖೆಯಿಂದ ತಿಳಿದು ಬಂದಿರುತ್ತದೆ.
ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಅನುಪಮ್ ಅಗರವಾಲ್ (ಐಪಿಎಸ್) ಅವರ ನಿರ್ದೇಶನದಂತೆ, ಮಂಗಳೂರು ನಗರದ ಉಪ ಪೊಲೀಸ್ ಆಯುಕ್ತರುಗಳಾದ ಸಿದ್ಧಾರ್ಥ ಗೋಯಲ್, ದಿನೇಶ್ ಕುಮಾರ್ ಅವರ ಮಾರ್ಗದರ್ಶನದಂತೆ, ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಧನ್ಯ ಎನ್ ನಾಯಕ್, ಕೊಣಾಜೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ರಾಜೇಂದ್ರ ಬಿ ಹಾಗೂ ಪಿಎಸ್ಐಗಳಾದ ಪುನೀತ್ ಗಾಂವ್ಕರ್, ನಾಗರಾಜ್, ಎಎಸ್ಐ ಪ್ರವೀಣ್ ಹಾಗೂ ಕೊಣಾಜೆ ಠಾಣೆ ಸಿಬ್ಬಂದಿಗಳಾದ ರೇಷ್ಮ ರಾಮನಾಯ್ಕ, ಬಸವನಗೌಡ, ದರ್ಶನ್, ಸುರೇಶ್, ಮುತ್ತು ಓಗೇನರ್, ಸಂತೋಷ್ ಕಾರ್ಯಾಚರಣೆಯಲ್ಲಿ ಭಾಗವಹಿಸಿರುತ್ತಾರೆ.