ಉಡುಪಿ, ಜೂ07(Daijiworld News/SS): ಒಂದು ವೇಳೆ ರಾಜ್ಯ ಸರ್ಕಾರ ಜಿಂದಾಲ್ ಕಂಪನಿಗೆ ಅಕ್ರಮವಾಗಿ ಜಮೀನು ಕೊಟ್ಟರೆ ಇದರ ವಿರುದ್ಧ ಬಿಜೆಪಿ ಉಗ್ರ ಹೋರಾಟ ನಡೆಸಲಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಎಚ್ಚರಿಕೆ ನೀಡಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜಿಂದಾಲ್ ಕಂಪನಿಗೆ ಎಕರೆಗಟ್ಟಲೆ (3667) ಭೂಮಿಯನ್ನು ರಾಜ್ಯ ಸರ್ಕಾರ ನೀಡಲು ಮುಂದಾಗಿದೆ. ಜೊತೆಗೆ, ಶುದ್ಧ ಕ್ರಯಪತ್ರ ಮಾಡಲು ಸಮ್ಮಿಶ್ರ ಸರಕಾರ ಹೊರಟಿದೆ. ಸರಕಾರ ಎಕರೆಗೆ 1.20 ಲಕ್ಷಕ್ಕೆ ಕೊಡಲು ಮುಂದಾಗಿದೆ. ಆದರೆ ಆ ಜಮೀನು ಎಕರೆಗೆ ಎರಡು ಕೋಟಿ ಬೆಲೆ ಬಾಳುತ್ತದೆ ಎಂದು ಕಿಡಿಕಾರಿದರು.
ಜಿಂದಾಲ್ ಸಂಸ್ಥೆಯಿಂದ ಸರಕಾರಕ್ಕೆ 1500 ಕೋಟಿ ರೂಪಾಯಿ ಬಾಕಿಯಿದೆ. ಯೋಜನೆ ವಿರೋಧಿಸಿ ಹಿರಿಯ ಕಾಂಗ್ರೆಸಿಗ ಎಚ್.ಕೆ. ಪಾಟೀಲ್ ಸರಕಾರಕ್ಕೆ ಪತ್ರ ಬರೆದಿದ್ದಾರೆ. ಬಿಜೆಪಿ ಈ ಅನ್ಯಾಯವನ್ನು ಖಂಡಿಸುತ್ತದೆ ಎಂದು ಹೇಳಿದರು.
ರಾಜ್ಯ ಸರಕಾರದ ಈ ನಡೆಯ ವಿರುದ್ಧ ರಾಜ್ಯಾಧ್ಯಕ್ಷ ಯಡಿಯೂರಪ್ಪ ಪ್ರತಿಭಟನೆಗೆ ಕರೆ ಕೊಟ್ಟಿದ್ದಾರೆ. ಜೂನ್ 13 ರಿಂದ 15 ರವರೆಗೆ ಬೆಂಗಳೂರಲ್ಲಿ ನಿರಂತರ ಪ್ರತಿಭಟನೆ ಮಾಡುತ್ತೇವೆ. ರಾಜ್ಯ ಸರಕಾರದ ಹಲವು ಲೋಪದೋಷದ ವಿರುದ್ಧ ಈ ಪ್ರತಿಭಟನೆ ಎಂದು ತಿಳಿಸಿದರು.