ಉಡುಪಿ, ಡಿ. 11(DaijiworldNews/AK):ಮಾನಿನಿ ರಾಜ್ಯ ಮಹಿಳಾ ಒಕ್ಕೂಟದ ವತಿಯಿಂದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಉಡುಪಿ ಧರ್ಮಪ್ರಾಂತ್ಯದ ಅನುಗ್ರಹ ಪಾಲನಾ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು.


![]()
ಸಮಾರಂಭವನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾ ಜೆರಾಲ್ಡ್ ಐಸಾಕ್ ಲೋಬೋ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.ಮಹಿಳೆಯರು ಸಂವಿಧಾನ ಮತ್ತು ಮಾನವ ಹಕ್ಕುಗಳ ಬಗ್ಗೆ ತಿಳುವಳಿಕೆ ಪಡೆದು, ತಳಮಟ್ಟದಲ್ಲಿ ಸ್ವಸಹಾಯ ಸಂಘಗಳನ್ನು ಬಲಪಡಿಸುವ ಮೂಲಕ ತಮ್ಮ ಸಂಘಟನೆಗಳನ್ನು ಬಲಪಡಿಸಿ, ರಾಜ್ಯಮಟ್ಟದ ಒಕ್ಕೂಟದಲ್ಲಿ ತಮ್ಮ ಛಾಪು ಮೂಡಿಸಬೇಕು ಎಂದು ಕರೆ ನೀಡಿದರು.
ವಕೀಲೆ ಜೂನಿಯಾ ಮೊನಾಲಿಸಾ ಬಾರ್ಬೋಜಾ ಅವರು ಡಿಜಿಟಲ್ ಯುಗದಲ್ಲಿ ಮಾನವ ಹಕ್ಕುಗಳು ಮತ್ತು ಖಾಸಗಿತನದ ಹಕ್ಕುಗಳ ಉಲ್ಲಂಘನೆ ಮತ್ತು ಜ್ಞಾನದ ಕೊರತೆಯಿಂದ ಮಹಿಳೆಯರು ಹೇಗೆ ಇದಕ್ಕೆ ಬಲಿಯಾಗುತ್ತಾರೆ ಎಂಬುದರ ಕುರಿತು ವಿವರವಾದ ಮಾಹಿತಿ ನೀಡಿದರು.
ಗಂಗಾ ಕುಲಾಲ್ ಸ್ವಾಗತಿಸಿದರು. ಗೀತಾ ಸುನಿಲ್ ವಂದಿಸಿದರು. ಜಾನೆಟ್ ಬಾರ್ಬೋಜಾ ಕಾರ್ಯಕ್ರಮ ನಿರೂಪಿಸಿದರು. ಸುನೀತಾ ಮತ್ತು ರೇಣುಕಾ ಪ್ರಾರ್ಥನೆ ನಡೆಸಿಕೊಟ್ಟರು. ಮಾನಿನಿ ರಾಜ್ಯ ಮಹಿಳಾ ಒಕ್ಕೂಟದ ಗೌರವಾಧ್ಯಕ್ಷೆ ಸಿಸ್ಟರ್ ನ್ಯಾನ್ಸಿ ಲೋಬೋ, ಅಧ್ಯಕ್ಷೆ ಮಂಜುಳಾ ಜಾನ್ ವೇದಿಕೆಯಲ್ಲಿದ್ದರು. ಉಡುಪಿ ಜಿಲ್ಲೆಯ ಸುಗಮ್ಯ ಜಿಲ್ಲಾ ಮಹಿಳಾ ಒಕ್ಕೂಟದ ಸರ್ವ ಸದಸ್ಯರು ಭಾಗವಹಿಸಿದ್ದರು.