Karavali
ಮಂಗಳೂರು ಸೆಂಟ್ರಲ್ ಜಂಕ್ಷನ್ ನಿಲ್ದಾಣಗಳನ್ನು ಎಸ್ಡಬ್ಲ್ಯೂಆರ್ ವ್ಯಾಪ್ತಿಗೆ ಸೇರಿಸುವಂತೆ ಸದನದಲ್ಲಿ ಕ್ಯಾ. ಚೌಟ ಪ್ರಸ್ತಾಪ
- Wed, Dec 11 2024 08:53:43 PM
-
ಮಂಗಳೂರು, ಡಿ.11(DaijiworldNews/AA): ಮಂಗಳೂರು ನಗರ ಭಾಗದಲ್ಲಿ ಕಾರ್ಯನಿರ್ವಹಿಸುವ ರೈಲ್ವೆ ಲೈನ್ಗಳು ಪ್ರಸ್ತುತ ದಕ್ಷಿಣ ರೈಲ್ವೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇದರ ಬದಲಿಗೆ ಈ ರೈಲ್ವೆ ಲೈನ್ಗಳನ್ನು ನೈರುತ್ಯ ರೈಲ್ವೆ ಅಡಿಯಲ್ಲಿ ಕಾರ್ಯನಿರ್ವಹಿಸುವ ಪ್ರಸ್ತಾವನೆಯನ್ನು ದ.ಕ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಸಂಸತ್ತಿನಲ್ಲಿ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರ ಮುಂದಿಟ್ಟಿದ್ದಾರೆ. ಆ ಮೂಲಕ, ಸಂಸದರು ಕರಾವಳಿಯ ರೈಲ್ವೆಯಲ್ಲಿ ಆಡಳಿತಾತ್ಮಕ ಸುಧಾರಣೆ ತರುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಟ್ಟಿದ್ದಾರೆ.
ಸಂಸತ್ನ ಚಳಿಗಾಲದ ಅಧಿವೇಶದಲ್ಲಿ ಬುಧವಾರ ಪ್ರಶ್ನೋತ್ತರ ವೇಳೆಯಲ್ಲಿ ಕ್ಯಾ. ಚೌಟ ಅವರು, ಕರಾವಳಿ ಸೇರಿದಂತೆ ಮಂಗಳೂರು-ಬೆಂಗಳೂರು ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಸಂಚಾರ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ ದಕ್ಷಿಣ ರೈಲ್ವೆ ವಿಭಾಗದಲ್ಲಿರುವ ಮಂಗಳೂರು ನಗರ ಭಾಗದ ರೈಲ್ವೆ ಲೈನ್ಗಳನ್ನು ನೈಋತ್ಯ ರೈಲ್ವೆ ವ್ಯಾಪ್ತಿಗೆ ತರುವ ಪ್ರಸ್ತಾಪ ರೈಲ್ವೆ ಇಲಾಖೆ ಬಳಿ ಇದೆಯೇ? ಇದಕ್ಕೆ ಯಾವ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಂಸತ್ತಿನಲ್ಲಿ ಇಂದು ರೈಲ್ವೆ ಸಚಿವರ ಗಮನಸೆಳೆದಿದ್ದಾರೆ.
ಮಂಗಳೂರು-ಬೆಂಗಳೂರು ಅತ್ಯಂತ ಪ್ರಮುಖ ರೈಲ್ವೆ ಸಂಪರ್ಕವಾಗಿದ್ದು, ಶಿರಾಡಿ ಘಾಟಿಯಲ್ಲಿ ಹಳಿ ವಿಸ್ತರಣೆಗೆ ಸಂಬಂಧಿಸಿದಂತೆ ಸಾಧಕ-ಬಾಧಕಗಳ ಅಧ್ಯಯನ ವರದಿ ಯಾವ ಹಂತದಲ್ಲಿದೆ. ಶಿರಾಡಿ ಘಾಟಿಯಲ್ಲಿ ಹೊಸ ಹಳಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಧ್ಯಯನ ವರದಿ ಪ್ರಗತಿ ಈಗ ಯಾವ ಹಂತ ತಲುಪಿದೆ. ಜತೆಗೆ ಮಂಗಳೂರು ಸೆಂಟ್ರಲ್ ಹಾಗೂ ಮಂಗಳೂರು ಜಂಕ್ಷನ್ ವ್ಯಾಪ್ತಿಯು ದಕ್ಷಿಣ ರೈಲ್ವೆಗೆ ಸೇರಿದ್ದು, ಉಳಿದ ಬಹುತೇಕ ಮಂಗಳೂರು-ಬೆಂಗಳೂರು ರೈಲ್ವೆ ವ್ಯಾಪ್ತಿ ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿದೆ. ಆದರೆ, ಕರಾವಳಿಯ ಸಮಗ್ರ ಅಭಿವೃದ್ಧಿಗೆ ಪೂರಕವಾಗಿರುವ ಈ ಮಾರ್ಗ ಒಂದೇ ವಲಯದ ವ್ಯಾಪ್ತಿಗೆ ಬಂದರೆ ಅಭಿವೃದ್ಧಿ ದೃಷ್ಟಿಯಿಂದ ಹಾಗೂ ಆಡಳಿತಾತ್ಮಕವಾಗಿ ಹೆಚ್ಚಿನ ಅನುಕೂಲವಾಗಲಿದೆ. ಹೀಗಾಗಿ, ಮಂಗಳೂರು ನಗರ ಭಾಗದ ರೈಲ್ವೆ ಲೈನ್ಗಳನ್ನು ನೈಋತ್ಯ ವಲಯಕ್ಕೆ ಸೇರಿಸುವಲ್ಲಿ ಸಚಿವಾಲಯದ ಮುಂದೆ ಪ್ರಸ್ತಾವನೆ ಬಂದಿದೆಯೇ ಎಂದು ಸಂಸದರು ಸದನದಲ್ಲಿ ಕೇಳಿದ್ದಾರೆ.
ಇದಕ್ಕೆ ಉತ್ತರಿಸಿರುವ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರು, ಮಂಗಳೂರು-ಬೆಂಗಳೂರು ರೈಲ್ವೆ ಮಾರ್ಗದ ನಿರ್ಮಾಣವನ್ನು ರಾಜ್ಯ ಸರ್ಕಾರ ಹಾಗೂ ರೈಲ್ವೆ ಸಚಿವಾಲಯದ ಜಂಟಿ ಸಹಭಾಗಿತ್ವದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಆದರೆ, ಈ ಸಹಭಾಗಿತ್ವದಲ್ಲಿ ರಾಜ್ಯ ಸರ್ಕಾರದ ಪಾಲು ಬರಬೇಕಿದೆ. ಹೀಗಿರುವಾಗ, ರಾಜ್ಯ ಸರ್ಕಾರದ ಅನುದಾನದ ಪಾಲು ಬಂದರೆ ಈ ಮಾರ್ಗದ ಮುಂದಿನ ಹಂತದ ಅಭಿವೃದ್ಧಿ ಕಾಮಗಾರಿಗಳನ್ನು ಮುಂದುವರಿಸುವುದಕ್ಕೆ ಸಾಧ್ಯವಾಗಲಿದೆ. ಆದರೆ, ಇಂದಿನ ಪ್ರಶ್ನೋತ್ತರ ಕಲಾಪ ಮುಕ್ತಾಯಗೊಂಡಿರುವ ಕಾರಣ ಸಂಸದರು ಪ್ರಸ್ತಾಪಿಸಿರುವ ಮಂಗಳೂರನ್ನು ನೈಋತ್ಯ ವಲಯಕ್ಕೆ ಸೇರಿಸುವುದು ಸೇರಿದಂತೆ ಉಳಿದ ವಿಚಾರಗಳ ಬಗ್ಗೆ ವಿವರವಾದ ಉತ್ತರವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ.
ರಾಜ್ಯದಲ್ಲಿ 01.04.2024 ರಂತೆ, ಒಟ್ಟು 3,840 ಕಿಮೀ ಉದ್ದದ 31 ಯೋಜನೆಗಳು (21 ಹೊಸ ಮಾರ್ಗಗಳು ಮತ್ತು 10 ದ್ವಿಗುಣಗೊಳಿಸುವಿಕೆ) 47,016 ಕೋಟಿ ವೆಚ್ಚವಾಗಿದ್ದು, ರಾಜ್ಯದಲ್ಲಿ ವಿವಿಧ ಸಂಪೂರ್ಣವಾಗಿ/ಭಾಗಶಃವಾದ ಯೋಜನೆ ಅನುಷ್ಠಾನದ ಹಂತಗಳಲ್ಲಿದೆ. ಅದರಲ್ಲಿ 1,302 ಕಿಮೀ ಉದ್ದವನ್ನು ಕಾರ್ಯಾರಂಭ ಮಾಡಲಾಗಿದೆ ಮತ್ತು ಮಾರ್ಚ್ 2024ರವರೆಗೆ 17,383 ಕೋಟಿ ವೆಚ್ಚ ಮಾಡಲಾಗಿದೆ.
ಜೊತೆಗೆ ಕ್ಯಾ. ಚೌಟ ಅವರು ಮಂಗಳೂರು-ಬೆಂಗಳೂರು ಮಾರ್ಗದ ರೈಲು ಸಂಪರ್ಕ ಹೆಚ್ಚಿಸುವ ನಿಟ್ಟಿನಲ್ಲಿ ಏನೆಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬ ಬಗ್ಗೆ ವಿಸ್ತೃತವಾದ ಪ್ರಶ್ನೆಯನ್ನು ಕೂಡ ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ರೈಲ್ವೆ ಸಚಿವರು, ಮಂಗಳೂರು-ಬೆಂಗಳೂರು ರೈಲು ಮಾರ್ಗವು ಮಂಗಳೂರಿನ ಬಂದರಿಗೆ ಸಂಪರ್ಕಿಸುವಲ್ಲಿ ಹಾಗೂ ಕರಾವಳಿಯ ಪ್ರವಾಸೋದ್ಯಮದ ಅಭಿವೃದ್ಧಿ ದೃಷ್ಟಿಯಿಂದ ಅತ್ಯಂತ ಮಹತ್ವದ ರೈಲು ಮಾರ್ಗವಾಗಿದೆ. ಆದರೆ, ಎಸ್ವಿಪಿ ಆರ್ಥಿಕ ದುಸ್ಥಿತಿಯಿಂದಾಗಿ ಈ ಮಾರ್ಗವನ್ನು ಸಾಧ್ಯವಾದಷ್ಟು ಸ್ವಾಧೀನಪಡಿಸಿಕೊಳ್ಳಲು ರೈಲ್ವೆ ಇಲಾಖೆ ಮುಂದಾಗಿದೆ. ಆ ಮೂಲಕ ರೈಲ್ವೆ ಹಳಿ ದ್ವಿಗುಣೀಕರಣ, ವಿದ್ಯುದ್ದೀಕರಣ ಮುಂತಾದ ಬಲವರ್ಧನೆ ಕಾರ್ಯಗಳನ್ನು ಕೈಗೆತ್ತಿಕೊಳ್ಳಬಹುದು ಎಂದಿದ್ದಾರೆ.
ಬೆಂಗಳೂರು ಹಾಗೂ ಮಂಗಳೂರು ಹಳಿ ದ್ವಿಗುಣೀಕರಣ(ಎಫ್ಎಲ್ಎಸ್)ಕ್ಕೆ ಸಂಬಂಧಿಸಿದಂತೆ ಎರಡು ಭಾಗವಾಗಿ ಮಂಜೂರಾತಿ
* ಮಂಗಳೂರು-ಹಾಸನ (247 ಕಿಮೀ)
* ಹಾಸನ-ಚಿಕ್ಕಬಾಣಾವರ (ಬೆಂಗಳೂರು) ಕುಣಿಗಲ್ ಮೂಲಕ (166ಕಿಮೀ) ಡಬ್ಲಿಂಗ್ಗೆ ಮಂಜೂರಾತಿಯಾಗಿದೆ.ಇದಲ್ಲದೆ, ಬೆಂಗಳೂರು ಮತ್ತು ತುಮಕೂರು ನಡುವಿನ 3 ಮತ್ತು 4ನೇ ಹಳಿಯ ಸಮೀಕ್ಷೆ ಕೂಡ ಮಂಜೂರಾಗಿದೆ.
ಆದರೆ, ರಾಜ್ಯ ಸರ್ಕಾರದ ಪಾಲು ಬರದ ಕಾರಣ ಈ ಮಾರ್ಗದ ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನಡೆಯಾಗಿದೆ ಎಂದು ರೈಲ್ವೆ ಸಚಿವರು ತಿಳಿಸಿದ್ದಾರೆ. ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಬದಲಾವಣೆ ತರಬಲ್ಲ ಈ ಪ್ರಮುಖವಾದ ಯೋಜನೆಯನ್ನು ಜಾರಿಗೆ ತರಲು ರಾಜ್ಯ ಸರಕಾರದ ಜೊತೆ ಚರ್ಚೆಗಳನ್ನು ನಡೆಸಲಾಗುವುದು ಎಂದು ಕ್ಯಾ. ಚೌಟ ಟ್ವೀಟ್ ಮಾಡಿದ್ದಾರೆ.
Spoke about various concerns pertaining to Railways during the question hour today.
— Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ (@CaptBrijesh) December 11, 2024
Taking it ahead from the response of our Union Railway Minister Shri @AshwiniVaishnaw I look forward to also pursuing this matter with our Karnataka government led by Shri @siddaramaiah as this… pic.twitter.com/AiqksV7MogHighlighted the issue of reorganisation of Mangalore Railways administration during the question hour today.
— Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ (@CaptBrijesh) December 11, 2024
The entire running stretch of railways Mlore-Blore falls under the SWR while our two stations Mlore Central & Junction come under Southern Railway.
Have also shared… pic.twitter.com/vsrUsWApYc