ಉಳ್ಳಾಲ, ಡಿ.11(DaijiworldNews/AA): ಸೋಮೇಶ್ವರ ಕಡಲ ತೀರದ ರುದ್ರಪಾದೆಯಲ್ಲಿ ಪರ್ಸ್, ಚಪ್ಪಲ್, ಕೂಲಿಂಗ್ ಗ್ಲಾಸ್ ಬಿಟ್ಟು ಕಾಣೆಯಾಗಿದ್ದ ವ್ಯಕ್ತಿಯ ಮೃತದೇಹ ಸಮುದ್ರ ತೀರದಲ್ಲಿ ಪತ್ತೆಯಾಗಿದೆ.

ಮೃತರನ್ನು ಮಂಗಳೂರಿನ ಪಡೀಲು, ವೀರನಗರ ನಿವಾಸಿ ಉದಯ್ ಕುಮಾರ್ (46) ಎಂದು ಗುರುತಿಸಲಾಗಿದೆ.
ಉದಯ್ ಅವರು ಡಿ.11ರಂದು ಮಧ್ಯಾಹ್ನ ಸೋಮೇಶ್ವರ ಸೋಮನಾಥ ಕ್ಷೇತ್ರದ ಎದುರು ತನ್ನ ದ್ವಿಚಕ್ರ ವಾಹನ ನಿಲ್ಲಿಸಿ ಸಮುದ್ರ ತೀರದ ರುದ್ರಪಾದೆಯತ್ತ ತೆರಳಿದ್ದಾರೆ. ಬಳಿಕ ರುದ್ರ ಪಾದೆಯಲ್ಲಿ ಪರ್ಸ್, ಚಪ್ಪಲ್, ಕೂಲಿಂಗ್ ಗ್ಲಾಸನ್ನ ಬಿಟ್ಟು ಕಾಣೆಯಾಗಿದ್ದರು. ಬೀಚಲ್ಲಿ ಸುತ್ತಾಡುತ್ತಿದ್ದ ಹುಡಗನೋರ್ವ ರುದ್ರಪಾದೆಯಲ್ಲಿದ್ದ ಪರ್ಸನ್ನು ಸ್ಥಳೀಯ ಗೂಡಂಗಡಿ ಮಾಲಕರಲ್ಲಿ ನೀಡಿದ್ದಾನೆ. ಗೂಡಂಗಡಿ ಮಾಲಕರು ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ ಎನ್ನಲಾಗಿದೆ.
ಕರಾವಳಿ ಕಾವಲು ಪಡೆಯ ಜೀವರಕ್ಷಕ ಸಿಬ್ಬಂದಿ ಸೇರಿದಂತೆ ಸ್ಥಳೀಯ ಈಜುಗಾರರು ಉದಯ್ ಅವರಿಗಾಗಿ ಸಮುದ್ರದಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಬಳಿಕ ಇಂದು ಸಂಜೆ ವೇಳೆ ಸೋಮೇಶ್ವರ ಕಡಲ ಕಿನಾರೆಯ ಅಲಿಮಕಲ್ಲು ಎಂಬಲ್ಲಿ ಉದಯ್ ಅವರ ಮೃತದೇಹ ಪತ್ತೆಯಾಗಿದೆ.
ಮೇಲ್ನೋಟಕ್ಕೆ ಉದಯ್ ಅವರು ರುದ್ರಪಾದೆಯಿಂದ ಸಮುದ್ರಕ್ಕೆ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದ್ದು, ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.