ಮಂಗಳೂರು, ಸೆ.09: ಮಂಗಳೂರು ಚಲೋ ಒಂದು ಫ್ಲಾಪ್ ಶೋ ಆಗಿದೆ ಎಂದು ತಿಳಿಸಿರುವ ವಿಧಾನ ಸಭಾ ಮುಖ್ಯ ಸಚೇತಕ ಐವನ್ ಡಿ’ಸೋಜ ಬಿಜೆಪಿ ಮುಂದಿನ ಚುನಾವಣೆಯನ್ನು ಗೆಲ್ಲುವುದು ಕನಸಿನ ಮಾತು ಎಂದು ಕುಹಕವಾಡಿದ್ದಾರೆ.
ಶನಿವಾರ, ಸೆಪ್ಟಂಬರ್ 9ರಂದು ಮಾಧ್ಯಮದ ಜೊತೆ ಮಾತನಾಡುತ್ತಿದ್ದ ಅವರು ಸಾರ್ವಜನಿಕರಿಗಾಗಿ ಉತ್ತಮ ಯೋಜನೆಗಳನ್ನು ಪರಿಚಯಿಸುವಲ್ಲಿ ನರೇಂದ್ರ ಮೋದಿ ವಿಫಲವಾಗಿದ್ದಾರೆ ಎಂದರು.
“ಬಿಜೆಪಿಯು ನರೇಂದ್ರ ಮೋದಿಯನ್ನೇ ಬಹಳವಾಗಿ ಅಲವಂಬಿಸಿದೆ ಮತ್ತು ಅವರು ಸಾರ್ವಜನಿಕರಿಗೆ ಅನುಕೂಲವಾಗುವಂಥಾ ಯೋಜನೆಗಳನ್ನು ರೂಪಿಸುವಲ್ಲಿ ವಿಫಲವಾಗಿದ್ದಾರೆ. ಜನರು ಇನ್ನೂ ಕೂಡಾ ನೋಟು ಅಮಾನ್ಯತೆಯ ಆಘಾತದಿಂದ ಹೊರಬಂದಿಲ್ಲ. ನೋಟು ಅಮಾನ್ಯದಿಂದ ದೇಶದ ಡಿಜಿಪಿ ಪಾತಾಳ ತಲುಪಿದೆ. ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆ ಏರುತ್ತಲೇ ಇದ್ದು ಸಾರ್ವಜನಿಕರು ಇದರಿಂದ ಕಂಗಾಲಾಗಿದ್ದಾರೆ. ಮೋದಿ ಸರಕಾರಕ್ಕೆ ರೈತರ ಬಗ್ಗೆ ಕಾಳಜಿಯಿಲ್ಲ ಹಾಗಾಗಿ ಇನ್ನೂ ಕೂಡಾ ರೈತರ ಸಾಲ ಮನ್ನಾ ಮಾಡುವ ಬಗ್ಗೆ ಅದು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ” ಎಂದು ಐವನ್ ನುಡಿದರು.
“ಬಿಜೆಪಿಯು ಪ್ರಜಾಪ್ರಭುತ್ವಕ್ಕೇ ಸವಾಲೆಸೆದಿದ್ದು ಮುಂಬರುವ ಚುನಾವಣೆಯಲ್ಲಿ ತನ್ನ ಪರ ಫಲಿತಾಂಶ ಬರಲು ಶತಾಯಗತಾಯ ಪ್ರಯತ್ನಿಸುತ್ತಿದೆ. 2008-2013ರಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದ್ದ ವೇಳೆ ಅವರೊಳಗೆಯೇ ಭಿನ್ನಾಭಿಪ್ರಾಯಗಳಿದ್ದವು ಈಗಲೂ ಹಾಗೆಯೇ ಇದೆ. ಬಿಜೆಪಿ ಸ್ಥಿರ ಸರಕಾರ ನೀಡುತ್ತದೆ ಎಂಬ ನಂಬಿಕೆಯನ್ನು ಜನರು ಕಳೆದುಕೊಂಡಿದ್ದಾರೆ” ಎಂದವರು ತಿಳಿಸಿದರು.
ಸಿ ಫೋರ್ ಚುನಾವಣಾ ಸಮೀಕ್ಷೆಯ ಬಗ್ಗೆ ಮಾತನಾಡಿದ ಅವರು,”ಸಿ ಫೋರ್ ವರದಿ ತಿಳಿಸಿರುವಂತೆ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ 120-132 ಸ್ಥಾನಗಳನ್ನು ಪಡೆದರೆ ಬಿಜೆಪಿ 60-70 ಸ್ಥಾನಗಳನ್ನಷ್ಟೇ ಪಡೆಯಲಿದೆ. ಆದರೆ ಬಿಜೆಪಿ ಇದು ಕಾಂಗ್ರೆಸ್ ಪ್ರಾಯೋಜಿತ ಸಮೀಕ್ಷೆ ಎಂದು ಹೇಳುತ್ತಿದ್ದಾರೆ. ನಂತರ ರಾಜಕೀಯ ಮತ್ತು ಸಾಮಾಜಿಕ ಅಧ್ಯಯನಗಳ ಕೇಂದ್ರ ನಡೆಸಿದ ಸಮೀಕ್ಷೆಯಲ್ಲಿ ಬಿಜೆಪಿ 113 ಸ್ಥಾನಗಳನ್ನು ಗೆದ್ದರೆ ಕಾಂಗ್ರೆಸ್ 86 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಹೇಳಲಾಯಿತು. ಈ ವರದಿಯು ವಾಸ್ತವಕ್ಕಿಂತ ಬಹಳ ದೂರವಾಗಿದ್ದು ಬಿಜೆಪಿಗರು ಇದನ್ನು ಕೇವಲ ತಮ್ಮ ಸಮಾಧಾನಕ್ಕಾಗಿ ಮಾಡಿದ್ದಾರೆ. ಅವರು ಚುನಾವಣೆಯಲ್ಲಿ ಕಾಂಗ್ರೆಸನ್ನು ಸೋಲಿಸುವ ಪ್ರಯತ್ನದಲ್ಲಿದ್ದಾರೆ ಆದರೆ ಅದು ಕೇವಲ ಕನಸ್ಸಿನಲ್ಲಿ ಮಾತ್ರ ಸಾಧ್ಯ. ನಮ್ಮ ಸರಕಾರದ ಜನಪರ ಯೋಜನೆಗಳ ಬಲದಿಂದಲೇ ನಾವು ಮುಂದಿನ ಚುನಾವಣೆಯನ್ನು ಗೆಲ್ಲಲಿದ್ದೇವೆ ಎಂಬ ನಂಬಿಕೆ ನನಗಿದೆ ಎಂಬ ವಿಶ್ವಾಸವನ್ನು ಐವನ್ ವ್ಯಕ್ತಪಡಿಸಿದರು.
ಮಂಗಳೂರು ಚಲೋ ರ್ಯಾಲಿಯ ಬಗ್ಗೆ ಮಾತನಾಡುತ್ತಾ, “ರ್ಯಾಲಿಗೂ ಮೊದಲು ಬಿಜೆಪಿಗರು ಕಾರ್ಯಕ್ರಮದ ಬಗ್ಗೆ ಠಾಂಠಾಂ ಹೊಡೆಯುತ್ತಾ ಬಂದಿದ್ದರು. ಆದರೆ ರ್ಯಾಲಿ ನಡೆದ ದಿನ ಅವರಿಗೆ ಕೇವಲ 3000ದಿಂದ 5000 ಜನರನ್ನಷ್ಟೇ ಜಮೆಮಾಡಲು ಸಾಧ್ಯವಾಯಿತು. ಇದು ಅವರು ನಿರೀಕ್ಷಿಸಿದ್ದಕ್ಕಿಂತ ಬಹಳ ಕಡಿಮೆಯಾಗಿತ್ತು. ಸ್ಥಳೀಯವಾಗಿ ಕೇವಲ ಬೆರಳೆಣಿಕೆಯ ಜನರಷ್ಟೇ ರ್ಯಾಲಿಯಲ್ಲಿ ಭಾಗವಹಿಸಿದರು. ಇದು ಜನರು ಬಿಜೆಪಿಯ ಪರವಾಗಿಲ್ಲ ಎಂಬುದನ್ನು ಸೂಚಿಸುತ್ತದೆ. ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸದಲ್ಲಿ ಬಿಜೆಪಿ ಸಂಪೂರ್ಣವಾಗಿ ವಿಫಲವಾಗಿದೆ” ಎಂದು ಕಾಂಗ್ರೆಸ್ ಹಿರಿಯ ಮುಖಂಡರಾದ ಐವನ್ ಅಭಿಪ್ರಾಯಪಟ್ಟರು.