ಉಡುಪಿ, ಜೂ07(Daijiworld News/SS): ವಾಟಾಳ್ ನಾಗರಾಜ್ ಅವರಂತೆ ವಿಭಿನ್ನ ಮಾದರಿಯ ಪ್ರತಿಭಟನೆ ನಡೆಸಿ ಉಡುಪಿಯ ವಾಟಾಳ್ ಎಂದು ಕರೆಸಿಕೊಳ್ಳುವ ನಾಗರೀಕಾ ಸೇವಾ ಸಮಿತಿಯ ನಿತ್ಯಾನಂದ ವಳಕಾಡು ಅವರು ವರುಣ ದೇವನ ಕೃಪೆಗಾಗಿ ಕಪ್ಪೆಗೆ ಮದುವೆ ಮಾಡಲು ನಿಶ್ಚಯಿಸಿದ್ದಾರೆ.
ಕರಾವಳಿಯಲ್ಲಿ ಸಮರ್ಪಕವಾಗಿ ಮಳೆಯಾಗದೇ ರೈತರು ಸೇರಿದಂತೆ ಜನ ಸಂಕಷ್ಟಕ್ಕೀಡಾಗಿದ್ದು, ಮಳೆಗಾಗಿ ನಾನಾ ಆಚರಣೆಗಳು ಶುರುವಾಗಿದೆ.
ಕರಾವಳಿ ಸೇರದಂತೆ ರಾಜ್ಯದ ಕೆಲವು ಭಾಗದಲ್ಲಿ ಸಕಾಲದಲ್ಲಿ ಮಳೆಯಾಗದೇ ರೈತರು ಪರದಾಡುವಂತಾಗಿದೆ. ಮಳೆ ಇಲ್ಲದೇ ಬೆಳೆ ನೆಲಕಚ್ಚುತ್ತಿದ್ದು, ಬರದ ಛಾಯೆ ಆವರಿಸಿಕೊಂಡು ಆತಂಕಕ್ಕೆ ಕಾರಣವಾಗಿದೆ. ಇದರಿಂದಾಗಿ ಮಳೆಗಾಗಿ ವರುಣ ದೇವನಿಗೆ ರೈತರು ಮೊರೆಯಿಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ನಿತ್ಯಾನಂದ ವಳಕಾಡು ಕಪ್ಪೆಗಳಿಗೆ ಮದುವೆ ಮಾಡಲು ಮುಂದಾಗಿದ್ದಾರೆ.
ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಹಾಗೂ ಪಂಚರತ್ನಾ ಸೇವಾ ಟ್ರಸ್ಟ್ ವತಿಯಿಂದ ಜಲಕ್ಷಾಮದ ನಿವರಾಣಾರ್ಥ ಹಾಗೂ ಮಳೆಗಾಗಿ ಕಪ್ಪೆಗಳಿಗೆ ಮದುವೆ ಕಾರ್ಯಕ್ರಮವನ್ನು ಜೂ.8ರಂದು ಅಪರಾಹ್ನ 12 ಗಂಟೆಗೆ ಉಡುಪಿ ಕಿದಿಯೂರ್ ಹೋಟೆಲ್ ವಾಹನ ನಿಲುಗಡೆ ಪ್ರಾಂಗಣದಲ್ಲಿ ಆಯೋಜಿಸಲಾಗಿದೆ. ಬೆಳಗ್ಗೆ 11ಗಂಟೆಗೆ ನಗರದ ಮಾರುತಿ ವಿಥಿಕಾದಲ್ಲಿರುವ ನಾಗರಿಕ ಸಮಿತಿಯ ಕಚೇರಿಯಿಂದ ಮದುವೆ ದಿಬ್ಬಣ ಹೊರಟು, ಹಳೆ ಡಯಾನ ವೃತ್ತ, ಕವಿ ಮುದ್ದಣ ಮಾರ್ಗದ ಮೂಲಕ ಸಾಗಿ ಉಡುಪಿ ಕಿದಿಯೂರ್ ಹೋಟೆಲ್ ವಾಹನ ನಿಲುಗಡೆ ಪ್ರಾಂಗಣದಲ್ಲಿ ಸೇರಲಿದೆ.
ಕಪ್ಪೆಗಳ ಹಾಗೂ ಚಿಕ್ಕಮಕ್ಕಳ ಮದುವೆ ಮಾಡಿಸಿದರೆ ಮಳೆ ಬರುತ್ತದೆ ಎನ್ನುವುದು ಅನಾದಿ ಕಾಲದಿಂದ ಬಂದ ಬಲವಾದ ನಂಬಿಕೆಯಾಗಿದೆ.