ಮಂಗಳೂರು, ಡಿ.13(DaijiworldNews/AA): ಪಿಕಪ್ ಗೂಡ್ಸ್ ವಾಹನವನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪುಂಜಾಲಕಟ್ಟೆ ಪೊಲೀಸರು ಬಾಗಲಕೋಟೆಯಲ್ಲಿ ದಸ್ತಗಿರಿ ಮಾಡಿದ್ದು, ಕಳವು ಮಾಡಿದ ವಾಹನವನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.


ಬಾಗಲಕೋಟೆ ಮುದೋಳು ತಾಲೂಕಿನ ಬಂಡನೂರು ಮನೆ ನಿವಾಸಿ ಕನಕಪ್ಪ ಯಮನಪ್ಪ ಕ್ಯಾದಿಗೇರಿ(24) ಹಾಗೂ ಹುನಗಂದ ತಾಲೂಕು ಚಿಕ್ಕಮಾಗಿ ಗ್ರಾಮದ ಮಡ್ಡಿಲಕ್ಕಮ್ಮ ದೇವಸ್ಥಾನದ ಬಳಿಯ ಹೊಸ ಫ್ಲ್ಯಾಟ್ ನಿವಾಸಿ ರಮೇಶ್ ಚೌಹಾಣ್(26) ಬಂಧಿತ ಆರೋಪಿಗಳು.
ಆರೋಪಿಗಳು ಡಿಸೆಂಬರ್ ೨ರಂದು ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾಲಾಡಿ ಗ್ರಾಮದ ಅರ್ತಿಲ ಎಂಬಲ್ಲಿರುವ ಟಿಯಾರಾ ಇಂಟರ್ಲಾಕ್ ಫ್ಯಾಕ್ಟರಿಯ ಆವರಣದಲ್ಲಿ ನಿಲ್ಲಿಸಿದ್ದ ಫ್ಯಾಕ್ಟರಿ ಮಾಲಿಕರಾದ ಟೆರೆನ್ಸ್ ಜೋಶೆಲ್ ವೇಗಸ್ ಎಂಬವರ ಬೊಲೆರೋ ಪಿಕಪ್ ಗೂಡ್ಸ್ ವಾಹನವನ್ನು ಕಳವು ಮಾಡಿರುತ್ತಾರೆ. ಈ ಬಗ್ಗೆ ಡಿ.3ರಂದು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಕಲಂ: 303(2) ಬಿಎನ್ಎಸ್ 2023ರಂತೆ ಪ್ರಕರಣ ದಾಖಲಾಗಿದೆ.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಾಗಲಕೋಟೆಯಲ್ಲಿ ದಸ್ತಗಿರಿ ಮಾಡಿದ್ದಾರೆ. ಜೊತೆಗೆ ಆರೋಪಿಗಳು ಕಳವು ಮಾಡಿದ ಸುಮಾರು 3 ಲಕ್ಷ ರೂಪಾಯಿ ಮೌಲ್ಯದ ಬೊಲೆರೋ ಪಿಕಪ್ ಗೂಡ್ಸ್ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಯತೀಶ್ ಎನ್, ಐ.ಪಿ.ಎಸ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ರಾಜೇಂದ್ರ ಡಿ.ಎಸ್ ರವರ ನಿರ್ದೇಶನದಂತೆ, ಬಂಟ್ವಾಳ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ವಿಜಯ ಪ್ರಸಾದ್ ರವರ ಮಾರ್ಗದರ್ಶನದಲ್ಲಿ, ಬೆಳ್ತಂಗಡಿ ಗ್ರಾಮಾಂತರ ವೃತ್ತ ನಿರೀಕ್ಷಕರಾದ ನಾಗೇಶ್ ಕದ್ರಿ ಅವರ ನೇತೃತ್ವದಲ್ಲಿ, ಪುಂಜಾಲಕಟ್ಟೆ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ನಂದ ಕುಮಾರ್ ಎಂ.ಎಂ (ಕಾ&ಸು) & ಓಮನ ಎನ್.ಕೆ (ತನಿಖೆ) ರವರ ಜೊತೆಗೆ ಸಿಬ್ಬಂದಿಗಳಾದ ಸಂದೀಪ್ ಎಸ್, ರಾಹುಲ್ ರಾವ್, ರಜಿತ್, ಸಲೀಂ ಪಟೇಲ್, ಪ್ರಕಾಶ್, ರಮ್ಯ ವೇಣೂರು ಠಾಣಾ ಸಿಬ್ಬಂದಿ ಬಸವರಾಜ್ ಹಾಗೂ ಗಣಕಯಂತ್ರ ವಿಭಾಗದ ಸಿಬ್ಬಂದಿಗಳಾದ ಸಂಪತ್ ಮತ್ತು ದಿವಾಕರ ಅವರು ಕಾರ್ಯನಿರ್ವಹಿಸಿರುತ್ತಾರೆ.