ಮಣಿಪಾಲ, ಡಿ. 13(DaijiworldNews/TA): ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿನಿ ತೃಷಾ ಸುರೇಶ್ ಶೆಟ್ಟಿ ಯೆಯ್ಯಾಡಿಯವರು ಅತ್ಯುತ್ತಮ ವಿದ್ಯಾರ್ಥಿನಿ ಪುರಸ್ಕಾರದೊಂದಿಗೆ ಡಾ. ಟಿಎಂಎ ಪೈ ಚಿನ್ನದ ಪದಕ ಪಡೆದುಕೊಂಡಿದ್ದಾರೆ.

ಮಣಿಪಾಲದ ಕೆಎಂಸಿ ಗ್ರೀನ್ಸ್ ನಲ್ಲಿ ನಡೆದ ಮಾಹೆಯ 32ನೇ ಘಟಿಕೋತ್ಸವದ ಸಂದರ್ಭ ಮಾಹೆಯ ಪ್ರಥಮ ಮಹಿಳೆ ಮತ್ತು ಕುಲಪತಿ ಡಾ. ರಾಮದಾಸ್ ಪೈ ಅವರ ಪತ್ನಿ ವಸಂತಿ ರಾಮದಾಸ ಪೈ ಅವರ ಉಪಸ್ಥಿತಿಯಲ್ಲಿ ಭಾರತ ಸರ್ಕಾರದ ಆರೋಗ್ಯ ಸಂಶೋಧನೆ ಮಹಾಮಂಡಳಿಯ ಮಹಾ ನಿರ್ದೇಶಕ ಡಾ. ರಾಜೀವ್ ಬೆಹಲ್ ಅವರು ತೃಷಾ ಎಸ್. ಶೆಟ್ಟಿ ಅವರಿಗೆ ಪುರಸ್ಕಾರ ಪ್ರದಾನ ಮಾಡಿ ಶುಭ ಹಾರೈಸಿದರು.
ಇವರ ಈ ಸಾಧನೆಯನ್ನು ಗಮನಿಸಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಸಾರ್ವಭೌಮ ಬಿರುದಾಂಕಿತ ಐಕಳ ಹರೀಶ್ ಶೆಟ್ಟಿಯವರ ಸಾರಥ್ಯದಲ್ಲಿ ಮುಂಬೈನ ಬಂಟರ ಸಂಘದಲ್ಲಿ ನಡೆದ ವಿಶ್ವ ಬಂಟರ ಸಂಘದ ಸಮಾಗಮ 2024 ಕಾರ್ಯಕ್ರಮದಲ್ಲಿ ತೃಷಾ ಸುರೇಶ್ ಶೆಟ್ಟಿಯವರನ್ನು ಪುಷ್ಪ ಗೌರವ ಶಾಲು, ಗೌರವ ಧನ ನೀಡಿ ಗೌರವಿಸಲಾಯಿತು. ಪ್ರಸ್ತುತ ತೃಷಾ ಸುರೇಶ್ ಶೆಟ್ಟಿಯವರು ಡೆಹರಾಡೂನ್ ನ ರಿಷಿಕೇಶ್ ಏಮ್ಸ್ ಆಸ್ಪತ್ರೆಯಲ್ಲಿ ಮಾಸ್ಟರ್ಸ್ ಮಾಡುತ್ತಿದ್ದಾರೆ.