ಸುಬ್ರಹ್ಮಣ್ಯ, ಜೂ07(Daijiworld News/SS): ಇತಿಹಾಸ ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಸಂಪುಟ ನರಸಿಂಹಸ್ವಾಮಿ ಮಠದ ಪಾವಿತ್ರ್ಯತೆಗೆ ಧಕ್ಕೆ ಉಂಟಾಗಬಾರದು ಎಂದು ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.
ಕುಕ್ಕೆ ದೇವಾಲಯ ಮತ್ತು ಮಠದ ನಡುವಿನ ಗೊಂದಲಗಳ ನಿವಾರಣೆಗಾಗಿ ಆಗಮಿಸಿದ ಶ್ರೀಗಳು ಎರಡೂ ಕಡೆಗೆ ತೆರಳಿ ಅಹವಾಲುಗಳನ್ನು ಸ್ವೀಕರಿಸಿ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಎರಡೂ ಕಡೆಯವರ ಅಹವಾಲು, ಅಭಿಪ್ರಾಯ, ಮಾಹಿತಿ ಸಂಗ್ರಹಿಸಿದ್ದೇನೆ. ಇದನ್ನು ಸಂಧಾನ, ಶಾಂತಿ, ಸೌಹಾರ್ದತೆಯಿಂದ ನಿವಾರಿಸಲು ಯಾವುದೇ ಕಷ್ಟವಿಲ್ಲ ಎಂದು ಹೇಳಿದರು.
ಎರಡೂ ಕಡೆಯವರೂ ಸಂಧಾನ ಮಾಡೋಣ ಎಂದು ಮುಂದೆ ಬಂದಿದ್ದಾರೆ. ಇಲ್ಲಿ ಮೂಲಭೂತವಾಗಿ ಯಾವುದೇ ದೊಡ್ಡ ಭಿನ್ನಾಭಿಪ್ರಾಯವಿಲ್ಲ. ಕೆಲವು ಅಭಿಪ್ರಾಯ ಭೇದವಿದೆ. ಅದನ್ನು ಸರಿಪಡಿಸಬಹುದು. ಸೌಹಾರ್ದ ಸಹಕಾರದಿಂದ ಮುಂದೆ ಮತ್ತೆ ಸಮಸ್ಯೆ ಮತ್ತು ಸಂಘರ್ಷ ಆಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಸರ್ವಸಮ್ಮತವಾದ ನಿರ್ಣಯಕ್ಕೆ ಬಂದು ಸೌಹಾರ್ದಯುತವಾದ ಹೊಸ ಯುಗ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಆಗಬೇಕು. ಈ ಬಗ್ಗೆ ದೇವರಲ್ಲಿ ಪ್ರಾರ್ಥಿಸಿ ಸಂಕಲ್ಪ ಮಾಡಿದ್ದೇನೆ. ಎರಡೂ ಕಡೆಯವರು ನೀಡಿದ ವಿವರಗಳನ್ನು ಈಗ ನಾನು ಬಹಿರಂಗಪಡಿಸುವುದಿಲ್ಲ ಎಂದು ತಿಳಿಸಿದರು.
ಹಳೆಯ ವಿಚಾರಗಳನ್ನು ಮತ್ತೆ ಮತ್ತೆ ಕೆದಕದೆ ಹೊಸ ಯುಗ ಪ್ರಾರಂಭವಾಗಬೇಕು. ಮತ್ತೆ ವಿವಾದ ಆಗದಂತೆ ಸೌಹಾರ್ದ ಮತ್ತು ಶಾಂತಿಯಿಂದ ಸಮಸ್ಯೆ ಬಗೆಹರಿಸುತ್ತೇನೆ ಎಂಬ ವಿಶ್ವಾಸ ನನಗಿದೆ ಎಂದು ತಿಳಿಸಿದರು.