ಕಾರ್ಕಳ, ಡಿ.13(DaijiworldNews/AA): ಕಾರು ಪ್ರಕರಣದಲ್ಲಿ ಭಾಗಿಯಾಗಿ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯು 14 ವರ್ಷದ ಹಿಂದೆಯೆ ಮೃತಪಟ್ಟಿದ್ದಾನೆ ಎಂಬ ವಿಷಯ ಬೆಳಕಿಗೆ ಬಂದಿದೆ.

ಪ್ರಕರಣದ ಹಿನ್ನೆಲೆ:
1997ರ ಸೆಪ್ಟೆಂಬರ್ 29ರಂದು ರಾತ್ರಿ ಪಡುಬಿದ್ರಿ ನಡ್ಸಾಲು ಗ್ರಾಮದ ನಿವಾಸಿ ಜೇಮ್ಸ್ ಡಯಾಸ್ ಎಂಬವರ ಮನೆಯ ಮುಂಭಾಗ ನಿಲ್ಲಿಸಿದ್ದ ಮಾರುತಿ ಓಮಿನಿ ಕಾರನ್ನು ಯಾರೋ ಕಳವುಗೈದಿದ್ದರು. ಈ ಕುರಿತು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದಲ್ಲಿ ಕಳವಾದ ಮಾರುತಿ ಓಮ್ನಿ ಕಾರನ್ನು ಶಿವಮೊಗ್ಗ ಜಿಲ್ಲಾ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪಡುಬಿದ್ರಿ ಪೊಲೀಸರು ಪತ್ತೆಹಚ್ಚಿದ್ದರು. ಕಾರು ಸಮೇತ ಸಾಗರದ ನಿವಾಸಿ ಹುಚ್ಚಪ್ಪ ಎಂಬಾತನನ್ನು ದಸ್ತಗಿರಿ ಮಾಡಿದ್ದರು. ವಿಚಾರಣೆಯ ಸಮಯದಲ್ಲಿ ಆರೋಪಿ ಹುಚ್ಚಪ್ಪನು ನೀಡಿರುವ ಹೇಳೀಕೆಯಂತೆ ಸಾಗರದ ನಿವಾಸಿಗಳಾದ ಬಸವರಾಜ್ ಮತ್ತು ದುರ್ಗಾನಾಥ್ ಎಂಬವರೊಂದಿಗೆ ಕಾರನ್ನು ಕಳವು ಮಾಡಿದ್ದಾಗಿ ಒಪ್ಪಿಕೊಂಡಿದ್ದನು.
ಆ ಸಂದರ್ಭದಲ್ಲಿ ಬಸವರಾಜ್ ಮತ್ತು ದುರ್ಗಾನಾಥ್ ಎಂಬುವರು ತಲೆಮರೆಸಿಕೊಂಡಿದ್ದು ದಸ್ತಗಿರಿ ಆಗಿರುವುದಿಲ್ಲ. ಬಳಿಕ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಲಾಗಿತ್ತು. ನ್ಯಾಯಾಲಯದ ವಿಚಾರಣೆಯ ಸಮಯ ದಸ್ತಗಿರಿಯಾಗದೆ ತಲೆಮಾಸಿಕೊಂಡಿದ್ದ ಆರೋಪಿಗಳಾದ ಬಸವರಾಜು ಮತ್ತು ದುರ್ಗಾನಾಥ್ ರವರ ವಿರುದ್ಧ ನ್ಯಾಯಾಲಯವು ಎಲ್ಪಿಸಿ ವಾರಂಟನ್ನು ಹೊರಡಿಸಿತ್ತು.
ಉಡುಪಿ ಜಿಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಂತೆ ಪಡುಬಿದ್ರಿ ಪೊಲೀಸ್ ಠಾಣಾ ಪಿಎಸ್ಐ ಪ್ರಸನ್ನ ಎಂಎಸ್ ರವರ ನಿರ್ದೇಶನದಂತೆ ಠಾಣಾ ಎಎಸ್ಐ ರಾಜೇಶ್ ಪಿ ರವರು ಎಲ್ಪಿಸಿ ವಾರೆಂಟ್ ಆಸಾಮಿ ಬಸವರಾಜ್ ಪತ್ತೆ ಬಗ್ಗೆ ಆತನ ವಿಳಾಸವಾದ ಶಿವಮೊಗ್ಗ ಜಿಲ್ಲೆ ಸಾಗರ ಎಂಬಲ್ಲಿಗೆ ಹೋಗಿ ವಿಚಾರಿಸಿದ್ದಾರೆ. ಈ ವೇಳೆ ಆರೋಪಿಯು ಸುಮಾರು 14 ವರ್ಷಗಳ ಹಿಂದೆ 2010ರ ಜುಲೈ 21ರಂದು ಆತನ ಸ್ವಂತ ಊರಾದ ಶಿವಮೊಗ್ಗದಲ್ಲಿ ಅಸೌಖ್ಯದಿಂದ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಈ ವಿಚಾರವನ್ನು ಮೃತ ವ್ಯಕ್ತಿಯ ಪತ್ನಿ ಹಾಗೂ ಮಕ್ಕಳು ತಿಳಿಸಿರುತ್ತಾರೆ. ಅವರ ಹೇಳಿಕೆ ಆಧಾರದಲ್ಲಿ ಎಲ್ಪಿಸಿ ವಾರಂಟ್ ಆಸಾಮಿ ಬಸವರಾಜನ ಮರಣದ ದೃಢಪತ್ರವನ್ನು ಶಿವಮೊಗ್ಗ ನಗರಸಭೆ ಕಚೇರಿಯಿಂದ ಪಡೆಯಲಾಗಿದೆ. ಎಲ್ಪಿಸಿ ವಾರೆಂಟು ಆಸಾಮಿ ಬಸವರಾಜನ ಮರಣದ ದೃಢ ಪತ್ರದೊಂದಿಗೆ ಎಲ್ಪಿಸಿ ವಾರಂಟನ್ನು ವರದಿಯೊಂದಿಗೆ ನ್ಯಾಯಾಲಯಕ್ಕೆ ನಿವೇದಿಸಲಾಗಿದೆ.