ಕುಂದಾಪುರ, ಜೂ 07: (Daijiworld News/SM): ಕಳೆದ ನಾಲ್ಕೂವರೆ ವರ್ಷಗಳ ಹಿಂದೆ ಬೈಂದೂರು ಸಮೀಪದ ನಡೆದ ಸ್ವರ್ಣೋದ್ಯಮಿಗಳ ದರೋಡೆ ಪ್ರಕರಣದ ಐವರು ಆರೋಪಿಗಳನ್ನು ದೋಷಿಗಳೆಂದು ಕುಂದಾಪುರದ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲ ಘೋಷಣೆ ಮಾಡಿದೆ.
ಕುಖ್ಯಾತ ದರೋಡೆಕೋರ ರವಿ ಜತ್ತನ್, ಶಿವ ಪ್ರಕಾಶ್, ಚಂದ್ರಹಾಸ, ಪ್ರದೀಪ ಪೂಜಾರಿ ಹಾಗೂ ದುರ್ಗಾಪ್ರಸಾದ್ ಶೆಟ್ಟಿ ಎನ್ನುವವರ ಮೇಲಿನ ಆರೋಪಣೆಗಳು ಸಾಬೀತಾಗಿದೆ. ನ್ಯಾಯಾಧೀಶರಾದ ಪ್ರಕಾಶ ಖಂಡೇರಿ ಅವರು ಅಪಾದಿತರಿಗೆ ಕಠಿಣ ಜೈಲು ಶಿಕ್ಷೆ ವಿಧಿಸಿ ತೀರ್ಪು ಘೋಷಿಸಿದ್ದಾರೆ.
ಸೆಕ್ಷನ್ 395ರಡಿಯಲ್ಲಿ ಆರೋಪಿಗಳಿಗೆ ಕಠಿಣ ಕಾರಾಗೃಹ ಶಿಕ್ಷೆ ಮತ್ತು ಪ್ರತಿಯೊಬ್ಬರಿಗೆ 20000 ರೂಪಾಯಿ ದಂಡ ವಿಧಿಸಲಾಗಿದ್ದು, ತಪ್ಪಿದ್ದಲ್ಲಿ 2 ತಿಂಗಳ ಹೆಚ್ಚುವರಿ ಸಾದಾ ಜೈಲುಶಿಕ್ಷೆ ವಿಧಿಸಲಾಗಿದೆ. ಇನ್ನು ಸೆಕ್ಷನ್ 397ರಡಿಯಲ್ಲಿ 7ವರ್ಷ ಕಠಿಣ ಕಾರಾಗೃಹ ಶಿಕ್ಷೆ ಘೋಷಿಸಲಾಗಿದ್ದು, ಎಲ್ಲಾ ಶಿಕ್ಷೆಗಳನ್ನು ಏಕಕಾಲಕ್ಕೆ ಜ್ಯಾರಿಗೊಳಿಸತಕ್ಕದ್ದು ಎಂದು ಆದೇಶ ನೀಡಲಾಗಿದೆ. ಆದರೆ ದಂಡವನ್ನು ಪ್ರತ್ಯೇಕ ಪಾವತಿಸುವಂತೆ ತೀರ್ಪನಲ್ಲಿ ಆದೇಶಿಸಲಾಗಿದೆ.
ಘಟನೆಯ ವಿವರ:
ಕಳೆದ 2014ರ ಅಕ್ಟೋಬರ್ 7ರಂದು ಬೈಂದೂರು ತಾಲೂಕು ಉಪ್ಪುಂದ ಗ್ರಾಮದ ಸೋನರಕೇರಿ ಬಳಿಯ ಗದ್ದೆಯಲ್ಲಿ ಈ ಐವರು ದರೋಡೆಕೋರರು ಉಪ್ಪುಂದದ ಚಿನ್ನದ ಅಂಗಡಿಯ ಮಾಲಕ ಸುಧೀಂದ್ರ ಶೇಟ್, ಅವರ ತಂದೆ ಗಣೇಶ್ ಶೇಟ್ ಹಾಗೂ ತಂಗಿಯನ್ನು ಹೊಂಚು ಹಾಕಿ ಅಡ್ಡಗಟ್ಟಿ ಚೂರಿ ತೋರಿಸಿ ಬೆದರಿಸಿ ಮುಖಕ್ಕೆ ಕಾರದ ಪುಡಿ ಎರಚಿ ಚೂರಿಯಿಂದ ಇರಿದು ದಾಂಧಲೆ ಮಾಡಿದ್ದರು.
ಇರಿತಕ್ಕೊಳಗಾದವರ ಕೂಗು ಕೇಳಿ ಸ್ಥಳೀಯ ನಿವಾಸಿ ಅನಿಲ್ ಶೇಟ್ ಸ್ಥಳಕಾಗಮಿಸಿದ್ದು ಅವರಿಗೂ ಚೂರಿ ಇರಿದ ದುಷ್ಕರ್ಮಿಗಳು ಚಿನ್ನದ ಬೆಂಡೋಲೆ, ವಿವಿಧ ಮಾದರಿಯ ಚಿನ್ನದ ಉಂಗರಗಳಿದ್ದ ಅಂದಾಜು 12 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದರೋಡೆ ಮಾಡಿ ಪರಾರಿಯಾಗಿದ್ದರು.
ಕರಾವಳಿಗೆ ಹೊಸದಾದ ಸಿನಿ ಶೈಲಿಯ ದರೋಡೆಯಿಂದಾಗಿ ಇಡೀ ಜಿಲ್ಲೆಗೆ ಜಿಲ್ಲೆಯೇ ಬೆಚ್ಚಿ ಬಿದ್ದಿತು. ದಾರಿಯಲ್ಲಿ ಅಡ್ಡಹಾಕಿ ನಡೆಸಿದ ದರೋಡೆಯ ಹಿಂದೆ ಹಗಲಿರುಳೆನ್ನದೆ ಬೆನ್ನುಬಿದ್ದ ಅಂದಿನ ಬೈಂದೂರು ಸಿಪಿಐ ಸುದರ್ಶನ್ ಹಾಗೂ ಪಿಎಸ್ಐ ಸಂತೋಷ ಕಾಯ್ಕಿಣಿ ಹಾಗೂ ತಂಡ ಕೆಲವೇ ದಿನಗಳಲ್ಲಿ ಆರೋಪಿಗಳನ್ನು ಬಂಧಿಸಿ ಕಳವಾದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದರು.