ಮಂಗಳೂರು, ಡಿ.15(DaijiworldNews/AA): ಯಕ್ಷಗಾನ ಕ್ಷೇತ್ರದ ಪ್ರಪ್ರಥಮ ಮಹಿಳಾ ವೃತ್ತಿಪರ ಭಾಗವತರೆಂದೇ ಖ್ಯಾತಿವೆತ್ತ ಕರ್ನಾಟಕ ರಾಜ್ಯೋತ್ಸವ ಪುರಸ್ಕೃತೆ ಲೀಲಾವತಿ ಬೈಪಾಡಿತ್ತಾಯ (77) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಶನಿವಾರ ಕೊನೆಯುಸಿರೆಳೆದಿದ್ದಾರೆ.

ಮೃತರು ಪತಿ, ಹಿರಿಯ ಹಿಮ್ಮೇಳವಾದಕ ಹರಿನಾರಾಯಣ ಬೈಪಾಡಿತ್ತಾಯ, ಪುತ್ರರಾದ ಪತ್ರಕರ್ತ ಅವಿನಾಶ್ ಮತ್ತು ಗುರುಪ್ರಸಾದ್ ಅವರನ್ನು ಅಗಲಿದ್ದಾರೆ. ಮೃತ ಲೀಲಾವತಿ ಅವರ ಅಂತಿಮ ಸಂಸ್ಕಾರವು ಡಿ.15ರಂದು ಬೆಳಗ್ಗೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಕಾಸರಗೋಡಿನ ಮಧೂರಿನಲ್ಲಿ 1947ರ ಮೇ 23ರಂದು ಜನಿಸಿದ್ದ ಲೀಲಾವತಿ ಸಣ್ಣ ಪ್ರಾಯದಲ್ಲೇ ತಂದೆಯನ್ನು ಕಳೆದು ಕೊಂಡ ಕಾರಣಕ್ಕಾಗಿ ತಾಯಿ ತವರೂರು ಮಧೂರಿನ ಪಡುಕಕ್ಕೆಪ್ಪಾಡಿ ಎಂಬಲ್ಲಿ ಸೋದರಮಾವನ ಮನೆಯಲ್ಲಿ ಬೆಳೆಯುತ್ತಾರೆ. ಸೋದರಮಾವ ರಾಮಕೃಷ್ಣ ಭಟ್, ಮಧೂರು ದೇವಾಲಯದಲ್ಲಿ ದೇವ ನೃತ್ಯ ಕಲಾವಿದರಾಗಿದ್ದರು.
ಬಡತನದಿಂದಾಗಿ ಲೀಲಾವತಿಗೆ ವಿದ್ಯೆ ಕಲಿಯಲಾಗಲಿಲ್ಲ. ಸುಮಧುರವಾಗಿ ಹಾಡುತ್ತಿದ್ದ ಅವರು ಪಿಟೀಲು ವಾದಕ ಪದ್ಮನಾಭ ಸರಳಾಯರ ಬಳಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿತರು. 23ನೇ ವರ್ಷ ಪ್ರಾಯದಲ್ಲಿ ತೆಂಕುತಿಟ್ಟಿನ ಚೆಂಡೆ-ಮದ್ದಳೆಯ ಕಲಾವಿದ ಹರಿನಾರಾಯಣ ಬೈಪಾಡಿತ್ತಾಯ ಅವರನ್ನು ಮದುವೆಯಾಗಿ ಕಡಬಕ್ಕೆ ಆಗಮಿಸುತ್ತಾರೆ.