ಉಡುಪಿ, ಡಿ.15(DaijiworldNews/AA): ಟಿಪ್ಪರ್ ಹಾಗೂ ಬೈಕ್ ನಡುವಿನ ಅಪಘಾತದಲ್ಲಿ ಸಹಸವಾರ ಮೃತಪಟ್ಟು, ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಅಲೆವೂರು- ಮಣಿಪಾಲ ರಸ್ತೆಯ ಶಾಂತಿನಗರದ ಬಳಿಯ ತಿರುವಿನಲ್ಲಿ ಸಂಭವಿಸಿದೆ.

ಜನಾರ್ಧನ ಮೃತ ಸಹಸವಾರ. ಹಾಗೂ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರ ಸಂತೋಷ್ ಅವರು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಲೆವೂರು ಕಡೆಯಿಂದ ಮಣಿಪಾಲ ಕಡೆಗೆ ಹೋಗುತ್ತಿದ್ದ ಮರಳು ಸಾಗಾಟದ ಟಿಪ್ಪರ್, ಅಲೆವೂರು ಕಡೆಯಿಂದ ಮಣಿಪಾಲ ಕಡೆಗೆ ಬರುತ್ತಿದ್ದ ಬೈಕಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಬೈಕಿನಲ್ಲಿದ್ದ ಸವಾರರು ರಸ್ತೆಗೆ ಬಿದ್ದಿದ್ದಾರೆ ಎನ್ನಲಾಗಿದೆ. ಇದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಜನಾರ್ದನ್ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಘಟನೆಗೆ ಕಾರಣವಾದ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಮಹಜರು ನಡೆಸಲು ತೆರಳಿದ ವೇಳೆ ಟಿಪ್ಪರ್ ವಾಹನದಲ್ಲಿ ಸುಮಾರು 2.5 ಯುನಿಟ್ ಮರಳು ಇರುವುದು ಕಂಡು ಬಂದಿದೆ. ಟಿಪ್ಪರ್ ಚಾಲಕ ಹಾಗೂ ಮಾಲಕ ಸೇರಿಕೊಂಡು ಯಾವುದೇ ಪರವಾನಿಗೆ ಪಡೆದುಕೊಳ್ಳದೇ ಅಕ್ರಮ ವಾಗಿ ಮರಳು ಸಾಗಾಟ ಮಾಡುತ್ತಿದ್ದುದು ತಿಳಿದುಬಂದಿದೆ.
ಅಲೆವೂರು-ಮಣಿಪಾಲ ಭಾಗದಲ್ಲಿ ರಾತ್ರಿ ವೇಳೆ ಅಕ್ರಮ ಮರಳು ಸಾಗಾಟದ ಟಿಪ್ಪರ್ ವಾಹನಗಳು ಎಗ್ಗಿಲ್ಲದೆ ಸಂಚಾರ ಮಾಡುತ್ತಿದ್ದು, ಇತರ ವಾಹನಗಳ ಸಂಚಾರ ಕಷ್ಟಕರ ವಾಗುತ್ತಿದೆ. ತಿರುವುಗಳಿಂದ ಕೂಡಿದ ಈ ರಸ್ತೆಯಲ್ಲಿ ಮರಳು ಸಾಗಾಟದ ವಾಹನಗಳು ವೇಗವಾಗಿ ಸಂಚರಿಸುತ್ತಿದ್ದು, ಪೊಲೀಸರು ಹಾಗೂ ಗಣಿ ಇಲಾಖೆಯವರು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.