ಕಾಸರಗೋಡು, ಡಿ 2: ಒಖಿ ಚಂಡಮಾರುತದ ಪರಿಣಾಮ ಸಮುದ್ರ ಮತ್ತೇ ಪ್ರಕ್ಷುಬ್ದಗೊಂಡಿದ್ದು, ನೀಲೇಶ್ವರದಲ್ಲಿ ಮೀನುಗಾರಿಕೆಗೆ ತೆರಳಿದ ಬೋಟ್ ಮಗುಚಿ ಓರ್ವ ನಾಪತ್ತೆಯಾದ ಘಟನೆ ನಡೆದಿದೆ.
ಕಾಞ೦ಗಾಡ್ ಹೊಸಹಿತ್ಲುವಿನ ಸುನಿಲ್ ಕುಮಾರ್ (40) ನಾಪತ್ತೆಯಾಗಿದ್ದು, ಇಬ್ಬರನ್ನು ಕರಾವಳಿ ರಕ್ಷಣಾ ಪಡೆ ಮತ್ತು ಮೀನುಗಾರಿಕಾ ರಕ್ಷಣಾ ಪಡೆಯ ಸಿಬ್ಬಂದಿಗಳು ರಕ್ಷಿಸಿದ್ದಾರೆ. ಇವರನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಪತ್ತೆಯಾದ ಮೀನುಗಾರನಿಗಾಗಿ ಶೋಧ ನಡೆಯುತ್ತಿದೆ.
ನೀಲೇಶ್ವರ ಆಯಿತ್ತಲ ಸಮುದ್ರದಲ್ಲಿ ಅಲೆಗಳ ಅಬ್ಬರಕ್ಕೆ ಬೋಟ್ ಮಗುಚಿ 19 ರಷ್ಟು ಬೋಟುಗಳು ಅಪಾಯಕ್ಕೆ ಸಿಲುಕಿದೆ. ಸಮುದ್ರದ ಅಲೆಗಳ ರೌದ್ರಾವತಾರಕ್ಕೆ ಈ ಘಟನೆ ನಡೆದಿದ್ದು, ಗಂಟೆಗಳ ಕಾಲ ಭಯದ ವಾತಾವರಣ ನಿರ್ಮಾಣವಾಗಿತ್ತು. ಸತತ ಪ್ರಯತ್ನದ ಬಳಿಕ ಕರಾವಳಿ ಪೊಲೀಸರು ಮತ್ತು ಮೀನುಗಾರರ ಸಹಾಯದಿಂದ ಕೆಲ ಬೋಟ್ ಗಳನ್ನು ದಡಕ್ಕೆ ತರಲಾಗಿದೆ.
ಒಖಿ ಚಂಡಮಾರುತದ ಅಬ್ಬರದಿಂದ ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಕಾಸರಗೋಡು ಮಳೆಯಾಗಿದೆ. ಉತ್ತರಕೇರಳದಲ್ಲಿ ಗುಡುಗು ಸಹಿತ ಮಳೆಯಾಗಿದ್ದು . ಕಾಂಞಂಗಾಡ್, ಚಿತ್ತಾರಿ, ಕೀಕಾನ, ಪಳ್ಳಿಕೆರೆ, ಬೇಕಲ, ಮಾಣಿಕೋತ್, ಕುಂಬಳೆ ಮೊದಲಾದಡೆ ಸಾಮಾನ್ಯ ಮಳೆಯಾಗಿದೆ.
ಮುಂದಿನ 24 ಗಂಟೆಗಳೊಳಗೆ ಭಾರೀ ಗಾಳಿ ಹಾಗೂ ಮಳೆಯಾಗುವ ಸಾಧ್ಯತೆಯಿದ್ದು, ಮೀನುಗಾರರು ಸಮುದ್ರಕ್ಕಿಳಿಯದಂತೆ ಜಿಲ್ಲಾಧಿಕಾರಿ ಕೆ. ಜೀವನ್ ಬಾಬು ಮುನ್ನೆಚ್ಚರಿಕೆ ನೀಡಿದ್ದಾರೆ.