ಕುಂದಾಪುರ, ಡಿ.16(DaijiworldNews/AA): ಪುರಾಣ ಪ್ರಸಿದ್ಧ ಮಹತೋಬಾರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಶ್ರೀ ದೇವರ ರಥೋರೋಹಣ, ಮನ್ಮಹಾರಥೋತ್ಸವವು ಡಿ.15 ಭಾನುವಾರ ಪೂರ್ವಾಹ್ನ 11.45ಕ್ಕೆ ಕುಂಭಲಗ್ನ ಸುಮುಹೂರ್ತದಲ್ಲಿ ವಿಜೃಂಭಣೆಯಿಂದ ಜರುಗಿತು.

















ರಥೋತ್ಸವದ ಪೂರ್ವದಲ್ಲಿ ದೇವಳದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡವು. ಬೆಳಿಗ್ಗೆಯಿಂದಲೆ ಸಹಸ್ರ ಸಂಖ್ಯೆಯಲ್ಲಿ ಭಕ್ತಾದಿಗಳು ದೇವಸ್ಥಾನಕ್ಕೆ ಆಗಮಿಸುತ್ತಿದ್ದರು. ದೇವರು ರಥವೇರುತ್ತಿದ್ದಂತೆ ಜಯಘೋಷ ಮೊಳಗಿತು. ರಥಬೀದಿಯಲ್ಲಿ ಕಿಕ್ಕಿರಿದ ಜನಸಂದಣಿಯಲ್ಲಿ ರಥೋತ್ಸವ ನೋಡಲು ಜನಕಾಯುತ್ತಿದ್ದ ದೃಶ್ಯ ಕಂಡು ಬಂತು. ಈ ಬಾರಿ ರಥೋತ್ಸವ ರವಿವಾರ ಬಂದ ಕಾರಣ ಜನಸಂಖ್ಯೆ ಹೆಚ್ಚಾಗಿತ್ತು.
ಕೋಟೇಶ್ವರ ರಥೋತ್ಸವ ಕರಾವಳಿ ಜಿಲ್ಲೆಯ ಬಹುದೊಡ್ಡ ಜಾತ್ರೆ. ಕುಂದಾಪುರ ಭಾಗದಲ್ಲಿ ಕೊಡಿ ಹಬ್ಬ ಎಂದು ಕರೆಯುತ್ತಾರೆ. ನವ ದಂಪತಿಗಳು ಇಲ್ಲಿ ರಥೋತ್ಸವದ ಸಂದರ್ಭದಲ್ಲಿ ಕಬ್ಬಿನ ಕೊಡಿಯನ್ನು ಮನೆಗೆ ತಗೆದುಕೊಂಡು ಹೋಗುವುದು ಸಂಪ್ರದಾಯ. ಇಂದಿಗೂ ಕೂಡಾ ಈ ಸಂಪ್ರದಾಯ ಅನುಚಾನವಾಗಿ ನಡೆದುಕೊಂಡು ಬಂದಿದೆ. ನವದಂಪತಿಗಳು ಕಬ್ಬಿನ ಕೊಡಿ ತಗೆದುಕೊಂಡು ಹೋಗುವ ದೃಶ್ಯ ಸ್ವಾಭಾವಿಕವಾಗಿತ್ತು.
ಕೋಟೇಶ್ವರ ರಥೋತ್ಸವದ ಸಂದರ್ಭದಲ್ಲಿ ಕೋಟಿಕೆರೆಯ ಸುತ್ತ ಸುತ್ತಕ್ಕಿ ಹಾಕುವ ಸಂಪ್ರದಾಯ ಕೂಡಾ ನಡೆಯುತ್ತದೆ. ಈ ಸಂಪ್ರದಾಯಕ್ಕೂ ವಿಶೇಷ ಮಹತ್ವವಿದೆ. ದೊಡ್ಡ ಸಂಖ್ಯೆಯಲ್ಲಿ ಭಕ್ತಾದಿಗಳು ಸುತ್ತಕ್ಕಿ ಹಾಕುವ ಮೂಲಕ ಕೃತಾರ್ಥರಾಗುತ್ತಾರೆ. ಕೆರೆಯಲ್ಲಿ ಮೀನುಗಳು ಇರುವುದರಿಂದ ಅಕ್ಕಿ ನೀರಿಗೆ ಬಿದ್ದರೆ ಮೀನುಗಳು ತಿಂದು ಹಾನಿಯಾಗುತ್ತದೆ ಎನ್ನುವ ಕಾರಣಕ್ಕೆ ಅಕ್ಕಿಯನ್ನು ಒಂದು ಕಡೆ ಸಂಗ್ರಹಿಸುವ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಸುತ್ತಕ್ಕಿ ಸೇವೆ ಸಲ್ಲಿಸಿದರು.
ಗರುಡ ಪ್ರದಕ್ಷಿಣೆ:
ಕೋಟೇಶ್ವರ ರಥೋತ್ಸವ ಸಂದರ್ಭದಲ್ಲಿ ಗರುಡ ಪ್ರದಕ್ಷಿಣೆ ಬರುವುದು ವಿಶೇಷವಾಗಿದೆ. ಈ ಬಾರಿಯೂ ಕೂಡಾ ಗರುಡ ರಥಕ್ಕೆ ಪ್ರದಕ್ಷಿಣೆ ಬರುವ ದೃಶ್ಯ ಕಂಡು ಬಂತು.
ಅನ್ನಸಂತರ್ಪಣೆ:
ಆಗಮಿಸುವ ಭಕ್ತಾದಿಗಳಿಗೆ ದೇವಸ್ಥಾನದಲ್ಲಿ ಅನ್ನಸಂರ್ತಣೆ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು.
ದೇವಸ್ಥಾನದ ಆಡಳಿತಾಧಿಕಾರಿ, ತಹಶೀಲ್ದಾರ್ ಶೋಭಾಲಕ್ಷ್ಮೀ ಎಚ್.ಎಸ್., ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ದೇವಸ್ಥಾನದ ತಂತ್ರಿಗಳು, ಪ್ರಧಾನ ಅರ್ಚಕರಾದ ಪ್ರಸನ್ನಕುಮಾರ್ ಐತಾಳ್ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಕೃಷ್ಣದೇವ ಕಾರಂತ, ಅರ್ಚಕ ವೃಂದ, ಆಡಳಿತ ಮಂಡಳಿ, ಸಿಬ್ಬಂದಿಗಳು, ಸೇವಾಕರ್ತರು ಉಪಸ್ಥಿತರಿದ್ದರು.