ಕಾಸರಗೋಡು, ಡಿ.16(DaijiworldNews/AA): ಪ್ರವಾಸೋದ್ಯಮ ವಲಯದಲ್ಲಿ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿದ್ದ ಯೋಜನೆಗಳು ಗುರಿ ತಲುಪಿದೆ.ಪ್ರವಾಸೋದ್ಯಮ ಕ್ಷೇತ್ರವು ಕೋವಿಡ್ ಬಿಕ್ಕಟ್ಟನ್ನು ನಿವಾರಿಸಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಭಿಪ್ರಾಯಪಟ್ಟರು.

ಭಾನುವಾರ ಗೇಟ್ವೇ ಬೇಕಲ್ ಪ್ರೀಮಿಯರ್ ಫೈವ್ ಸ್ಟಾರ್ ರೆಸಾರ್ಟ್ ನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ, ಪ್ರವಾಸೋದ್ಯಮ ಕ್ಷೇತ್ರವು ದೊಡ್ಡ ಬಿಕ್ಕಟ್ಟನ್ನು ಎದುರಿಸಿತು. ಸರ್ಕಾರದ ನೇತೃತ್ವದಲ್ಲಿ ರಾಜ್ಯ ಸರ್ಕಾರವು ಆವರ್ತ ನಿಧಿ ಪ್ಯಾಕೇಜ್, ಪ್ರವಾಸೋದ್ಯಮ ಉದ್ಯೋಗ ಬೆಂಬಲ ಯೋಜನೆ ಮತ್ತು ಪ್ರವಾಸೋದ್ಯಮ ಹೌಸ್ಬೋಟ್ ಸೇವಾ ಯೋಜನೆಯಂತಹ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಅವೆಲ್ಲವೂ ಫಲ ನೀಡಿವೆ, ಹೊಸ ಅಂಕಿ ಅಂಶಗಳು ತೋರಿಸುತ್ತವೆ ಎಂದರು.
ದೇಶೀಯ ಪ್ರವಾಸಿಗರಿಗೆ ಸಂಬಂಧಿಸಿದಂತೆ, 2024 ರ ಮೊದಲ ಆರು ತಿಂಗಳಲ್ಲಿ ಸುಮಾರು ಒಂದೂವರೆ ಕೋಟಿ ಪ್ರವಾಸಿಗರು ಕೇರಳಕ್ಕೆ ಭೇಟಿ ನೀಡಿದ್ದಾರೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಶೇ 20ರಷ್ಟು ಹೆಚ್ಚಳವಾಗಿದೆ. ಕೇರಳದ ಉತ್ತರ ಭಾಗದಲ್ಲಿ ಪ್ರವಾಸೋದ್ಯಮ ಯೋಜನೆ, ಜೀವವೈವಿಧ್ಯ ಯೋಜನೆಗಳು, ಉತ್ತರ ಮಲಬಾರ್ ಪ್ರವಾಸೋದ್ಯಮ ಸರ್ಕ್ಯೂಟ್, ಪಿಲ್ಗ್ರಿಮ್ ಟೂರಿಸಂ ಮತ್ತು ಹೆರಿಟೇಜ್ ಟೂರಿಸಂ ಎಲ್ಲವೂ ಹೆಚ್ಚು ಗಮನ ಸೆಳೆಯುತ್ತಿವೆ ಎಂದು ಹೇಳಿದರು.
ಬೇಕಲ ಅಭಿವೃದ್ಧಿ ನಿಗಮ ಯೋಜನೆಯಡಿಯಲ್ಲಿ ರೆಸಾರ್ಟ್ ನಿರ್ಮಾಣ ಪೂರ್ಣಗೊಂಡಿದೆ. 1995ರಲ್ಲಿ ಬಿ.ಆರ್. ಡಿಸಿ ರಚನೆಗೂ ಮುನ್ನ ಬೇಕಲಕ್ಕೆ 50 ಸಾವಿರ ಪ್ರವಾಸಿಗರು ಆಗಮಿಸುತ್ತಿದ್ದು, ಇಂದು 5 ಲಕ್ಷಕ್ಕೂ ಹೆಚ್ಚು ಜನ ಆಗಮಿಸುತ್ತಿದ್ದಾರೆ. ಬೇಕಲ ಪ್ರವಾಸೋದ್ಯಮ ಚಟುವಟಿಕೆಗಳಿಗಾಗಿ 32 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. 150 ಕೋಟಿ ಹೂಡಿಕೆ ಇದಾಗಿದೆ. ಫೆಬ್ರವರಿಯಲ್ಲಿ ನಡೆಯಲಿರುವ ಹೂಡಿಕೆದಾರರ ಸಮಾವೇಶಕ್ಕೆ ಉದ್ಯಮದ ಪ್ರಮುಖರನ್ನು ಮುಖ್ಯಮಂತ್ರಿ ಆಹ್ವಾನಿಸಿದ್ದಾರೆ.
ರಾಷ್ಟ್ರೀಯ ಆದಾಯದ ಶೇಕಡಾ 10 ಕ್ಕಿಂತ ಹೆಚ್ಚು ಪ್ರವಾಸೋದ್ಯಮ ಕ್ಷೇತ್ರದಿಂದ ಬರುತ್ತದೆ. ಕೇರಳ ಭಾರತದಲ್ಲಿ ಅತಿ ಹೆಚ್ಚು ಪಂಚತಾರಾ ಹೋಟೆಲ್ಗಳನ್ನು ಹೊಂದಿರುವ ರಾಜ್ಯವಾಗಿದೆ. ಆತಿಥ್ಯ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳ ನಡುವೆ ಉತ್ತಮ ಸಂಬಂಧವಿದೆ ಎಂದು ಹೇಳಿದರು.
ಲೋಕೋಪಯೋಗಿ ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವ ಪಿ.ಎ.ಮುಹಮ್ಮದ್ ರಿಯಾಝ್ ಅಧ್ಯಕ್ಷೆತೆ ವಹಿಸಿ ಮಾತನಾಡಿ ಸಂಸದ ರಾಜ್ ಮೋಹನ್ ಉಣ್ಣಿ ತ್ತಾನ್, ಶಾಸಕ ಇ.ಚಂದ್ರಶೇಖರನ್, ಎಂ.ರಾಜಗೋಪಾಲನ್, ಪ್ರವಾಸೋದ್ಯಮ ಮತ್ತು ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಕೆ.ಬಿಜು, ಐಎಚ್ಸಿಎಲ್ನ ಹಿರಿಯ ಉಪಾಧ್ಯಕ್ಷ ಸತ್ಯಜಿತ್ ಕೃಷ್ಣನ್, ಸಿ. ಪ್ರಭಾಕರನ್ ಹೇಳಿದರು. ಗೇಟ್ವೇ ಗ್ರೂಪ್ ಉಪಾಧ್ಯಕ್ಷ ಲೇ ಟಾಟಾ ಅವರು ಗೇಟ್ವೇ ಬ್ರಾಂಡ್ ಅನ್ನು ಪರಿಚಯಿಸಿದರು.
ಜಿಲ್ಲಾ ಪಂಚಾಯಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಜಿಲ್ಲಾಧಿಕಾರಿ ಕೆ.ಇಂಪಾಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ, ಪ್ರವಾಸೋದ್ಯಮ ನಿರ್ದೇಶಕಿ ಶಿಖಾ ಸುರೇಂದ್ರನ್, ಕಾಞಂಗಾಡ್ ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ.ಮಣಿಕಂಠನ್, ಉದುಮ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ಲಕ್ಷ್ಮಿ, ಪಳ್ಳಿಕ್ಕರೆ ಗ್ರಾಮ ಪಂಚಾಯತ್ ಅಧ್ಯಕ್ಷ ಎಂ.ಕುಮಾರನ್, ಅಜನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಟಿ. ಶೋಭಾ, ಚೆಮ್ನಾಡ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಫೈಜಾ ಅಬೂಬಕರ್, ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾ ಕೃಷ್ಣನ್, ಕಾಞಂಗಾಡ್ ಬ್ಲಾಕ್ ಪಂಚಾಯತ್ ಸದಸ್ಯೆ ಪುಷ್ಪಾ ಶ್ರೀಧರನ್, ಉದುಮ ಗ್ರಾಮ ಪಂಚಾಯತ್ ಸದಸ್ಯ ಪಿ ಸುಧಾಕರನ್ ಮೊದಲಾದವರು ಮಾತನಾಡಿದರು. ಶಾಸಕ ಸಿ.ಎಚ್.ಕುಞ೦ಬು ಸ್ವಾಗತಿಸಿ, ಬಿಆರ್ಡಿಸಿ ಎಂಡಿಪಿ ಶಿಜಿನ್ ವಂದಿಸಿದರು.