ಬಂಟ್ವಾಳ, ಡಿ.17(DaijiworldNews/AK): ಬ್ರಿಟಿಷರ ಕಾಲದಿಂದ ಜೈಲಾಗಿದ್ದ ಬಂಟ್ವಾಳ ನಗರ ಪೋಲಿಸ್ ಠಾಣೆಯ ಹಳೆಯ ಠಾಣೆ ಜಿಲ್ಲಾ ಸೈಬರ್ ಕ್ರೈಮ್ ಏಕೋನಾಮಿಕ್ಸ್ ನಾರ್ಕೋಟಿಕ್ಸ್ ( ಸೆನ್ CEN) ಪೋಲಿಸ್ ಠಾಣೆಯಾಗಿ ಮಾರ್ಪಾಡುಗೊಳ್ಳುತ್ತಿದ್ದು, ಕಾಮಗಾರಿ ಭರದಿಂದ ಸಾಗುತ್ತಿದೆ,ಬಹುತೇಕ ಮಳೆಗಾಲದ ಮುನ್ನವೇ ಸುಸಜ್ಜಿತ ಕಟ್ಟಡದಲ್ಲಿ ಕಾರ್ಯಚರಿಸುವುದು ಗ್ಯಾರಂಟಿಯಾಗಿದೆ.


ಪ್ರಸ್ತುತ ಜಿಲ್ಲೆಯ ಮಂಗಳೂರು ಕಮೀಷನರೇಟ್ ವ್ಯಾಪ್ತಿಯ ಬಂದರು ನಗರದಲ್ಲಿ ಬಾಡಿಗೆ ಕಟ್ಟಡದಲ್ಲಿ ಸೆನ್ ಪೋಲಿಸ್ ಸ್ಟೇಷನ್ ಇದ್ದು, ಜಿಲ್ಲೆಯ ಸುಳ್ಯ, ಪುತ್ತೂರು, ಬೆಳ್ತಂಗಡಿ, ಕಡಬ, ಉಪ್ಪಿನಂಗಡಿ, ಬಂಟ್ವಾಳ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಸೈಬರ್ ಕ್ರೈಮ್ ಗಳ ವಿಚಾರಗಳ ಪ್ರಕರಣ ದಾಖಲಿಸಲು ಮಂಗಳೂರಿಗೆ ತೆರಳುತ್ತಿದ್ದರು.
ಕಟ್ಟಡದ ಕೆಲಸ ಪೂರ್ಣಗೊಂಡು ಅಧಿಕೃತವಾಗಿ ಉದ್ಘಾಟನೆಯಾದ ಬಳಿಕ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕಚೇರಿಯ ವೃತ್ತದ ವ್ಯಾಪ್ತಿಯಾಗಿರುವ ಬಂಟ್ವಾಳ ನಗರ ಪೋಲಿಸ್ ಠಾಣೆಯ ಆವರಣದೊಳಗೆ ಕಾರ್ಯಚರಿಸಲಿದ್ದು, ಎಸ್.ಪಿ.ಕಚೇರಿಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಠಾಣೆಗಳ ಪ್ರಕರಣಗಳು ಇಲ್ಲಿ ದಾಖಲಿಸಲಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಮ್ ಗಳು ಹೆಚ್ಚಾಗುತ್ತಿದ್ದು, ಸೆನ್ ಪೊಲೀಸ್ ಅಧಿಕಾರಿಗಳಿಗೆ ಒತ್ತಡವೂ ಹೆಚ್ಚಾಗುತ್ತಿದೆ.ಹಾಗಾಗಿ ದಿನದಿಂದ ದಿನಕ್ಕೆ ಸೈಬರ್ ಪ್ರಕರಣಗಳು ಕಂಡುಬರುವ ಕಾಲಘಟ್ಟದಲ್ಲಿ ಬಂಟ್ವಾಳದ ಜನತೆಗೆ ಅತ್ಯಂತ ಸಂತಸದ ಸುದ್ದಿಯಾಗಿದೆ.
ಇಲ್ಲದಿದ್ದರೆ ಸೆನ್ ಪೋಲಿಸ್ ಠಾಣೆಗೆ ದೂರು ನೀಡಬೇಕಾದ ಸಂದರ್ಭದಲ್ಲಿ ಮಂಗಳೂರಿಗೆ ಅಲೆದಾಡುವ ಸ್ಥಿತಿಯಿದ್ದು,ಇನ್ಮುಂದೆ ಅದು ಬಗೆಹರಿಯಲಿದೆ. ಬಂಟ್ವಾಳ ತಾಲೂಕಿನ ಜನತೆಗೆ ಅತ್ಯಂತ ಹತ್ತಿರದಲ್ಲಿ ಠಾಣೆ ಆರಂಭವಾಗುತ್ತದೆ, ಉಳಿದಂತೆ ಜಿಲ್ಲೆಯ ಇತರ ಠಾಣೆಯ ವ್ಯಾಪ್ತಿಯ ಜನರಿಗೂ ತುಸು ಹತ್ತಿರವೇ ಆಗಿದೆ.ಮತ್ತು ಟ್ರಾಫಿಕ್ ಕಿರಿಕಿರಿಯಿಂದಲೂ ಸ್ವಲ್ಪ ಸೇಫ್ ಆಗಿದೆ ಎಂದು ಹೇಳಬಹುದು.
ಬ್ರಿಟಿಷ್ ಕಾಲದ ಜೈಲು....
ಬಂಟ್ವಾಳ ನಗರ ಪೋಲಿಸ್ ಠಾಣೆಯಲ್ಲಿದ್ದ ಜೈಲು ತುಂಬಾ ಹಳೆಯದಾಗಿದೆ ಮತ್ತು ಹಂಚಿನ ಮಾಡು ಹೊಂದಿದೆ. ಅತ್ಯಂತ ಪುರಾತನ ಶೈಲಿಯ ಕಲೆಯನ್ನು ಹೊಂದಿರುವ ಜೈಲು ನಿಜಕ್ಕೂ ಮುಂದಿನ ತಲೆಮಾರಿಗೆ ಪಳೆಯುಳಿಕೆ ರೀತಿಯಲ್ಲಿ ಉಳಿಯಬೇಕು . ಅತ್ಯಂತ ಸುಂದರವಾದ ಕೆತ್ತನೆಯ ಮಾದರಿಯಲ್ಲಿ ಈ ಜೈಲು ನಿರ್ಮಾಣವಾಗಿದ್ದು,ಬಹುಶಃ ಜಿಲ್ಲೆಯಲ್ಲಿ ಇಂತಹ ಮಾದರಿಯ ಜೈಲು ಇರಲಿಕ್ಕಿಲ್ಲ ಎಂದು ಹೇಳಬಹುದು. ಹಾಗಾಗಿ ಈ ಜೈಲು ಉಳಿಸಿಕೊಂಡು ಸೆನ್ ಪೋಲಿಸ್ ನಿರ್ಮಾಣಕ್ಕೆ ಇಲಾಖೆ ಮುಂದಾಗಿರುವುದು ಸಂತಸದ ವಿಚಾರವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯ ಬಹುತೇಕ ಎಲ್ಲಾ ಹಳೆಯ ಮಾದರಿಯ ಹಂಚಿನ ಮಾಡಿನ ಠಾಣೆಗಳನ್ನು ಕೆಡವಿ ಸುಸಜ್ಜಿತ ನೂತನ ಮಾದರಿಯಲ್ಲಿ ಠಾಣೆಗಳ ನಿರ್ಮಾಣವಾಗಿದೆ.
ಠಾಣೆಯ ನೋಟ
ಜಿಲ್ಲೆಯ ಬಂದರು ನಗರದಲ್ಲಿ ಬಾಡಿಗೆ ಕಟ್ಟಡದಲ್ಲಿರುವ ಸೆನ್ ಪೋಲೀಸ್ ಠಾಣೆಯಲ್ಲಿ ಒಬ್ಬರು ಡಿ.ವೈ.ಎಸ್.ಪಿ.ಒಬ್ಬರು ಸರ್ಕಲ್ ಇನ್ಸ್ ಪೆಕ್ಟರ್, ಎಸ್.ಐ.ಗಳು ಇದ್ದು 25 ಮಂದಿ ಸಿಬ್ಬಂದಿಗಳು ಕರ್ತವ್ಯ ಮಾಡುತ್ತಿದ್ದಾರೆ.ಪ್ರಸ್ತುತ ಇಲ್ಲಿ ಪೂರ್ಣಕಾಲಿಕ ಪೋಲಿಸ್ ಇನ್ಸ್ ಪೆಕ್ಟರ್ ನೇಮಕವಾಗಿಲ್ಲ, ಬಂಟ್ವಾಳ ನಗರ ಪೋಲಿಸ್ ಠಾಣೆಯ ಇನ್ಸ್ ಪೆಕ್ಟರ್ ಆನಂತಪದ್ಮನಾಭ ಅವರಿಗೆ ಚಾರ್ಜ್ ವಹಿಸಿಕೊಡಲಾಗಿದೆ.
ಪೂರ್ಣಗೊಂಡ ಮೇಲೆ ಸವಿವಿಸ್ತಾರವಾದ ಮಾಹಿತಿ: ಎಸ್.ಪಿ.ಯತೀಶ್ ಎನ್.
ಮಂಗಳೂರು ಜಿಲ್ಲೆಯ ಬಂದರುವಿನಲ್ಲಿ ಬಾಡಿಗೆ ಕಟ್ಟಡದಲ್ಲಿರುವ ಸೆನ್ ಪೋಲಿಸ್ ಸ್ಟೇಷನ್ ಬಂಟ್ವಾಳಕ್ಕೆ ಬರಲಿದೆ.ಈಗಾಗಲೇ ಕೆಲಸ ಕಾರ್ಯಗಳು ಪ್ರಗತಿಯಲ್ಲಿದೆ. ಎಲ್ಲಾ ಕೆಲಸಗಳು ಮುಗಿದ ಬಳಿಕ ಸವಿಸ್ತಾರವಾಗಿ ಮಾಹಿತಿ ನೀಡಲಿದ್ದೇವೆ ಎಂದು ಮಾಹಿತಿ ನೀಡಿದರು.
ಮಳೆಗಾಲದ ಮುನ್ನ ಕೆಲಸ ಪೂರ್ಣ: ನವೀನ್ ಚಂದ್ರ
ಬಂಟ್ವಾಳ ನಗರ ಪೋಲಿಸ್ ಠಾಣೆಯ ಪಕ್ಕದಲ್ಲಿಯೇ ಸೆನ್ ಪೋಲಿಸ್ ಠಾಣೆಗಾಗಿ ಕಾಮಗಾರಿ ನಡೆಯುತ್ತಿದೆ.ಸುಮಾರು 35 ಲಕ್ಷ ವೆಚ್ಚದಲ್ಲಿ ಹಳೇಯ ಕಟ್ಟಡದ ರಿಪೇರಿ ಹಾಗೂ ಹೊಸದಾದ ಕಟ್ಟಡದ ನಿರ್ಮಾಣ ಕಾರ್ಯಕ್ಕೆ ಭರದಿಂದ ಸಾಗುತ್ತಿದೆ. ಹಳೆಯ ಕಾಲದ ಹಂಚಿನ ಮಾಡು ಇರುವ ಪುರಾತನವಾದ ಕಟ್ಟಡವನ್ನು ಹಾಗೇ ಉಳಿಸಿಕೊಂಡು ಅದರ ಮಾಡು ಸಹಿತ ಇತರ ಕೆಲಸಗಳನ್ನು ಮಾಡಲಿದ್ದೇವೆ.ಇದರ ಮುಂಭಾಗದಲ್ಲಿ 8 ಫಿಲ್ಲರ್ ಗಳ ಮೂಲಕ ಸ್ಲ್ಯಾಬ್ ನ ವರಾಂಡ ನಿರ್ಮಾಣವಾಗಲಿದೆ.
ಎರಡು ವರ್ಷಗಳ ಹಿಂದೆ ಸೆನ್ ಠಾಣೆಯ ನಿರ್ಮಾಣಕ್ಕೆ ಅನುಮೋದನೆಗಾಗಿ ಕಳುಹಿಸಿಕೊಡಲಾಗಿತ್ತು. ಈ ವರ್ಷ ಕಾಮಗಾರಿಗೆ ಹಣ ಮಂಜೂರು ಆಗಿದೆ. ಹಳೆಯ ಕಟ್ಟಡದ ಜೊತೆ ಹೊಸತಾಗಿ ನಿರ್ಮಾಣಗೊಳ್ಳುವ ಕಟ್ಟಡದಲ್ಲಿ ಮೆನ್ ಮತ್ತು ವುಮೆನ್ ಜೈಲು, ಡಿ.ವೈ.ಎಸ್.ಪಿ.ಸರ್ಕಲ್ ಇನ್ಸ್ ಪೆಕ್ಟರ್, ಎಸ್.ಐ.ಅವರಿಗೆ ಮೂರು ಕೊಠಡಿ ಇನ್ನು ಸಿಬ್ಬಂದಿಗಳ ಕೆಲಸಕ್ಕೆ ಬೇರೆ ಬೇರೆ ಕೊಠಡಿಗಳು, ಸಾರ್ವಜನಿಕರು ಅಹವಾಲು ಸ್ವೀಕರಿಸುವ ಕೊಠಡಿ ಮತ್ತು ಎರಡು ಟಾಯ್ಲೆಟ್ ಗಳು ನಿರ್ಮಾಣವಾಗಲಿದೆ ಎಂದು ನಿರ್ಮಿತಿ ಕೇಂದ್ರದ
ಇಂಜಿನಿಯರ್ ನವೀನ್ ಚಂದ್ರ ತಿಳಿಸಿದ್ದಾರೆ.