ಮಂಗಳೂರು,, ಡಿ.17(DaijiworldNews/AK): ಮಂಗಳೂರಿಗೆ ಮಾದಕ ವಸ್ತು ಕೋಕೆನ್ ಪೂರೈಕೆ ಮಾಡುತ್ತಿದ್ದ ನೈಜೇರಿಯಾ ಪ್ರಜೆಯನ್ನು ಸಿಸಿಬಿ ಪೋಲೀಸರು ಬಂಧಿಸಿದ್ದಾರೆ.

ಗೋವಾದಲ್ಲಿ ನೆಲೆಸಿರುವ ಆರೋಪಿ ಮೈಕೆಲ್ ಒಕಾಫರ್ ಓಡಿಕ್ಪೋ(44) ಬಂಧಿತ ಆರೋಪಿ. ಗೋವಾ ರಾಜ್ಯದಿಂದ ಮಂಗಳೂರು ನಗರಕ್ಕೆ ನಿಷೇದಿತ ಮಾದಕ ವಸ್ತುವಾದ ಕೋಕೇನ್ ನ್ನು ಮಾರಾಟ ಮಾಡುತ್ತಿದ್ದ ಪ್ರಸ್ತುತ ಗೋವಾದಲ್ಲಿ ವಾಸ್ತವ್ಯವಿರುವ ನೈಜೇರಿಯಾ ದೇಶದ ಪ್ರಜೆಯನ್ನು ಪತ್ತೆ ಹಚ್ಚಿ 30 ಗ್ರಾಂ ಕೋಕೆನ್ ನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
2024 ನೇ ಮಾರ್ಚ್ ತಿಂಗಳಲ್ಲಿ ಮಂಗಳೂರು ನಗರಕ್ಕೆ ಗೋವಾ ರಾಜ್ಯದಿಂದ ನಿಷೇದಿತ ಮಾದಕ ವಸ್ತುವಾದ ಕೋಕೆನ್ ನ್ನು ಖರೀದಿಸಿಕೊಂಡು ಉಳ್ಳಾಲ ತಾಲೂಕು ಆಂಬ್ಲಮೊಗರು ಗ್ರಾಮದ ಎಲಿಯಾರ್ ಪದವು ಮೈದಾನದ ಬಳಿಯಲ್ಲಿ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಕೋಕೆನ್ ನ್ನು ಮಾರಾಟ ಮಾಡುತ್ತಿದ್ದ ಅಂಬ್ಲಮೊಗರು ನಿವಾಸಿಗಳಾದ ಸದಕತ್.ಯು @ ಶಾನ್ ನವಾಜ್, ಮಹಮ್ಮದ್ ಅಶ್ಫಕ್ @ ಅಶ್ಫಾ ಎಂಬವರನ್ನು ಮಂಗಳೂರು ಸಿಸಿಬಿ ಪೊಲೀಸರು ದಸ್ತಗಿರಿ ಮಾಡಿ ಅವರ ವಶದಿಂದ 34 ಗ್ರಾಂ ಕೋಕೆನ್ ಹಾಗೂ ಇತರ ಒಟ್ಟು ರೂ. 2,72,000 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿಗಳಿಗೆ ಕೋಕೇನ್ ನೀಡಿದ ಗೋವಾದ ಡ್ರಗ್ ಪೆಡ್ಲರ್ ಬಗ್ಗೆ ಮಾಹಿತಿ ಸಂಗ್ರಹಿಸಿದ ಮಂಗಳೂರು ಸಿಸಿಬಿ ಪೊಲೀಸರು ಗೋವಾ ರಾಜ್ಯದ ಉತ್ತರ ಗೋವಾದ ಕಾಲನ್ ಗೂಟ್
ಎಂಬಲ್ಲಿಗೆ ಆರೋಪಿ ಪತ್ತೆ ಹಚ್ಚಿದ್ದಾರೆ.
ನೈಜೇರಿಯಾ ದೇಶದ ಪ್ರಜೆ
ಆರೋಪಿ ಮೈಕೆಲ್ ಒಕಾಫರ್ ಓಡಿಕ್ಪೋ( 44) , S/o ಜೇಮ್ಸ್ ಪ್ರಸ್ತುತ R/o: ಕೊಠಡಿ ಸಂಖ್ಯೆ. UGF -2, ಓಂ ಐಸ್ಕ್ರೀಮ್ ಪಾರ್ಲರ್ ಹತ್ತಿರ, ಸೋಡಿಯಮ್ ಸೊಯ್ಲಿಮ್ ಸೋಲಿಮ್ ಉತ್ತರ ಗೋವಾ ಗೋವಾ ರಾಜ್ಯದಲ್ಲಿ ವಾಸವಾಗಿದ್ದ.
ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಆತನ ವಶದಿಂದ 30 ಗ್ರಾಂ ಕೋಕೇನ್, ಸಾಗಾಟಕ್ಕೆ ಉಪಯೋಗಿಸಿದ ಬೊಲೆನೋ ಕಾರು, ಮೊಬೈಲ್ ಫೋನ್ ಗಳು-2, ನಗದು ಹಣ ರೂ. 4500/- ಡಿಜಿಟಲ್ ತೂಕ ಮಾಪನವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 11,25,000 ರೂ. ಆರೋಪಿಯನ್ನು ಮುಂದಿನ ಕ್ರಮಕ್ಕಾಗಿ ಸೆನ್ ಕ್ರೈಂ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಆರೋಪಿಯು ನೈಜೇರಿಯಾ ದೇಶದವನಾಗಿದ್ದು, 2012 ನೇ ಇಸವಿಯಲ್ಲಿ ಭಾರತಕ್ಕೆ ವ್ಯಾಪಾರದ ವೀಸಾದಲ್ಲಿ ಬಂದು ಮುಂಬೈಯಲ್ಲಿ ಸುಮಾರು ಒಂದೂವರೆ ವರ್ಷ ವಾಸ್ತವ್ಯವಿದ್ದವನು ನಂತರ ಗೋವಾಕ್ಕೆ ಬಂದು ಗೋವಾದಲ್ಲಿ ವಾಸ್ತವ್ಯವಿದ್ದು ಮಾದಕ ವಸ್ತು ಮಾರಾಟ ಮಾಡುತ್ತಿರುವುದಾಗಿದೆ. ಈತನ ವಿರುದ್ದ ಈಗಾಗಲೇ ಗೋವಾದಲ್ಲಿ ಒಟ್ಟು 3 ಮಾದಕ ವಸ್ತು ಮಾರಾಟ ಪ್ರಕರಣ ದಾಖಲಾಗಿರುತ್ತದೆ.
ಆರೋಪಿಯ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ್ ರವರ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಹೆಚ್ ಎಂ, ಪಿಎಸ್ಐಯವರಾದ ಶರಣಪ್ಪ ಭಂಡಾರಿ ಮತ್ತು ಸಿಸಿಬಿ ಸಿಬ್ಬಂದಿಯವರು ಪಾಲ್ಗೊಂಡಿದ್ದರು.