ಕುಂದಾಪುರ, ಡಿ.18(DaijiworldNews/AA): ತಾಲೂಕಿನ ಹೊಂಬಾಡಿ-ಮಂಡಾಡಿ, ಹಾಗೂ ಹಳ್ಳಾಡಿ-ಹರ್ಕಾಡಿ ಗ್ರಾಮ ವ್ಯಾಪ್ತಿಯ ವಿವಿಧೆಡೆಗಳಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು ಸ್ಥಳೀಯ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದ್ದು, ಅರಣ್ಯ ಇಲಾಖೆ ಚಿರತೆಯನ್ನು ಹಿಡಿಯಲು ಬೋನು ಅಳವಡಿಸಿದೆ.

ಅರಣ್ಯ ಇಲಾಖೆಯ ಮೊಳಹಳ್ಳಿ ಶಾಖೆಗೊಳಪಡುವ ಯಡಾಡಿ- ಮತ್ಯಾಡಿ ಗ್ರಾಮದ ಕರಿನಕಟ್ಟೆ ರಾಮದಾಸ ಭಂಡಾರಿ ಎನ್ನುವರ ಮನೆಯ ಮುಖ್ಯ ದ್ವಾರದವರೆಗೂ ಮಂಗಳವಾರ ಮಧ್ಯರಾತ್ರಿ ವೇಳೆಗೆ ಚಿರತೆ ಆಗಮಿಸಿತ್ತು. ಈ ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬುಧವಾರ ಮುಂಜಾನೆ ವೇಳೆಯೂ ಕೂಡ ಇಲ್ಲಿಗೆ ಸಮೀಪದ ಹಳ್ಳಾಡಿ-ಹರ್ಕಾಡಿ ಗರಿಕೆಮಠ, ಸಿರಿಮಠ ಎಂಬಲ್ಲಿ ಚಿರತೆ ಓಡಾಡಿದ ಬಗ್ಗೆ ವರದಿಯಾಗಿದೆ. ಕುರುಚಲು ಕಾಡು ಪ್ರದೇಶವಾಗಿರುವ ಈ ಭಾಗದಲ್ಲಿ ನಿರಂತರವಾಗಿ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು, ಚಿರತೆ ಆಹಾರವನ್ನರಿಸಿ ಮನೆಬಾಗಿಲಿಗೆ ಬರುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುವಂತೆ ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.
ಘಟನಾ ಸ್ಥಳಕ್ಕೆ ಮೊಳಹಳ್ಳಿ ಶಾಖೆಯ ಅರಣ್ಯಾಧಿಕಾರಿಗಳು, ಸಿಬ್ಬಂದಿ ಭೇಟಿ ನೀಡಿದ್ದು ಆಯಕಟ್ಟಿನ ಸ್ಥಳದಲ್ಲಿ ಬೋನು ಇರಿಸಿ ಚಿರತೆ ಸೆರೆ ಕಾರ್ಯಾಚರಣೆಗೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.