ಮಂಗಳೂರು,ಡಿ.18(DaijiworldNews/TA): ಕರಾವಳಿ ಸಂಸ್ಕೃತಿಯ ಅನಾವರಣದೊಂದಿಗೆ ಡಿ.21ರಿಂದ ಜನವರಿ 19ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಕರಾವಳಿ ಉತ್ಸವವನ್ನು ಆಯೋಜಿಲು ದ.ಕ ಜಿಲ್ಲಾಡಳಿತ ಸಿದ್ದತೆ ನಡೆಸಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ರೊಬೊಟಿಕ್ ಬಟರ್ ಫ್ಲೈ ಪ್ರದರ್ಶನ ನಡೆಯಲಿದೆ. ಡಿ.21 ರಂದು ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಅಂದು ಸಂಜೆ 4ಕ್ಕೆ ಕೊಡಿಯಾಲ್ ಬೈಲ್ ನ ಕೆನರಾ ಕಾಲೇಜಿನಿಂದ ಕರಾವಳಿ ಉತ್ಸವ ಮೈದಾನದವರೆಗೆ ಆಕರ್ಷಕ ಮೆರವಣಿಗೆ ನಡೆಯಲಿದೆ. ಜಿಲ್ಲೆಯ ಸಂಸ್ಕೃತಿ ಮತ್ತು ವೈವಿಧ್ಯಮಯ ಸಾಂಪ್ರದಾಯಿಕ ವೇಷಭೂಷಣಗಳೊಂದಿಗೆ ಕಲಾವಿದರ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಸಂಜೆ 5.30ಕ್ಕೆ ಕರಾವಳಿ ಉತ್ಸವ ಮೈದಾನದಲ್ಲಿ ಕರಾವಳಿ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಪ್ರಸಿದ್ಧ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನಡೆಯಲಿದೆ.
ಡಿ. 22ರಂದು ನಗರ ಕದ್ರಿ ಪಾರ್ಕ್ನಲ್ಲಿ ಸಂಜೆ 4 ಗಂಟೆಗೆ ರೊಬೊಟಿಕ್ ಬಟರ್ ಫ್ಲೈ ಪಾರ್ಕ್ ಪ್ರದರ್ಶನ ಆರಂಭಗೊಳ್ಳಲಿದೆ. ಕರಾವಳಿ ಉತ್ಸವದುದ್ದಕ್ಕೂ ಈ ಪ್ರದರ್ಶನ ಸಂಜೆ 4ರಿಂದ ರಾತ್ರಿ 9 ಗಂಟೆ ವರೆಗೆ ವಿಶೇಷ ಆಕರ್ಷಣೆಯಾಗಿ ಮುಂದುವರಿಯಲಿದೆ. ಕನ್ನಡ, ತುಳು, ಬ್ಯಾರಿ, ಕೊಂಕಣಿ, ಅರೆ ಭಾಷೆ ಅಕಾಡೆಮಿಗಳ ಸಹಕಾರದೊಂದಿಗೆ ನಡೆಯಲಿರುವ ಉತ್ಸವದಲ್ಲಿ ಕರಾವಳಿಯ ವೈವಿಧ್ಯತೆಗಳು ಸಾರ್ವಜನಿಕರನ್ನು ರಂಜಿಸಲಿವೆ. ತಣ್ಣೀರು ಬಾವಿ ಬೀಚ್ನಲ್ಲಿ ಡಿ. 28 ಮತ್ತು 29ರಂದು ಬೀಚ್ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದವರು ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಜಿ.ಪಂ. ಸಿಇಒ ಡಾ. ಆನಂದ್, ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್, ಪಾಲಿಕೆ ಆಯುಕ್ತ ಆನಂದ್ ಸಿ.ಎಲ್. ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.