ಕಾಸರಗೋಡು, ಜೂ 8 (Daijiworld News/MSP): ಕೊಲೆ ಯತ್ನ ಪ್ರಕರಣದ ಆರೋಪಿಯಾಗಿರುವ ಯುವಕನೋರ್ವನನ್ನು ತಂಡವೊಂದು ಮಚ್ಚಿನಿಂದ ಕಡಿದು ಕೊಲೆಗೆ ಯತ್ನಿಸಿದ ಘಟನೆ ಕೇರಳ - ಕರ್ನಾಟಕ ಗಡಿ ಪ್ರದೇಶದ ಪೆರ್ವೋಡಿ ಎಂಬಲ್ಲಿ ಜೂ.8 ರ ಶುಕ್ರವಾರ ರಾತ್ರಿ ನಡೆದಿದ್ದು, ಗಂಭೀರ ಗಾಯಗೊಂಡ ಯುವಕನನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಾಯಾರು ಬೆರಿಪದವಿನ ಪ್ರಸಾದ್ (26) ಎಂಬಾತನ ಮೇಲೆ ಹಲ್ಲೆ ನಡೆಸಲಾಗಿದೆ. ಈತ ಐದು ತಿಂಗಳ ಹಿಂದೆ ಬಾಯಾರು ಮುಳಿಗದ್ದೆಯಲ್ಲಿ ಮದ್ರಸ ಅಧ್ಯಾಪಕ ಕರೀಂ ಮುಸ್ಲಿಯಾರ್ ರವರ ಕೊಲೆಗೆತ್ನಿಸಿದ ಆರೋಪಿಯಾಗಿದ್ದಾನೆ.
ಶುಕ್ರವಾರ ರಾತ್ರಿ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಎರಡು ಬೈಕ್ ಗಳಲ್ಲಿ ಬಂದ ನಾಲ್ವರ ತಂಡವು ಈತನ ಮೇಲೆ ದಾಳಿ ನಡೆಸಿದೆ. ಗಂಭೀರ ಗಾಯಗೊಂಡಿರುವ ಪ್ರಸಾದ್ ನನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದರು. ಘಟನೆ ಸುದ್ದಿ ತಿಳಿದು ಮಂಜೇಶ್ವರ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿದ್ದು, ತನಿಖೆ ಆರಂಭಿಸಿದ್ದಾರೆ. ಪರಿಸರದಲ್ಲಿ ಪೊಲೀಸರು ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದಾರೆ.