ಬಂಟ್ವಾಳ, ಡಿ.18(DaijiworldNews/AK):ಐಸ್ ಕ್ಯಾಂಡಿ , ಖಾದ್ರಿಯಕ್ಕನನ್ನು ಮರೆಯದ ದೀಪಿಕಾ ಹಿರಿಯ ವಿದ್ಯಾರ್ಥಿಗಳು. ಮೊಡಂಕಾಪುವಿನ ದೀಪಿಕಾ ಪ್ರೌಢಶಾಲೆಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ವಜ್ರಮಹೋತ್ಸವನ್ನು ಶಾಲೆಯ ಹಿರಿಯ ವಿದ್ಯಾರ್ಥಿಗಳು ಹಲವಾರು ವಿಶೇಷ ಕಾರ್ಯಕ್ರಮಗಳ ಮೂಲಕ ಸಂಭ್ರಮದಿಂದ ಆಚರಿಸಿದರು.

ಎರಡನೇ ದಿನದ ಕಾರ್ಯಕ್ರಮದಲ್ಲಿ ತಮಗೆ ವಿದ್ಯೆ ನೀಡಿದ ಗುರು ಶ್ರೇಷ್ಠರನ್ನು ಗೌರವಿಸಿ ಕೃತಾರ್ಥರಾದರು. ಈ ಎಲ್ಲಾ ಕಾರ್ಯಕ್ರಮಗಳ ಪೈಕಿ ವಿಶೇಷವಾಗಿ ಗಮನ ಸೆಳೆದಿದ್ದು ಇಬ್ಬರು ಐಸ್ ಕ್ಯಾಂಡಿ ವ್ಯಾಪರಿಗಳಾದ ಖಾದ್ರಿಯಕ್ಕ ಹಾಗೂ ದಾಮೋದರ್ ಅವರನ್ನು ಗೌರವಿಸಿದ ಕ್ಷಣ!
ಮೂವತ್ತು ನಲವತ್ತು ವರ್ಷಗಳ ಹಿಂದಿನ ಶಾಲಾ ವಿದ್ಯಾರ್ಥಿಗಳ ಜೀವನ ಈಗಿನ ವಿದ್ಯಾರ್ಥಿಗಳಂತಿರಲ್ಲ. ಈಗಿನ ವಿದ್ಯಾರ್ಥಿಗಳು ಐವತ್ತು, ನೂರು ರೂಪಾಯಿಯನ್ನು ಒಂದು ಕ್ಷಣಕ್ಕೆ ಖರ್ಚು ಮಾಡಿದರೆ ಕೇವಲ 50 ಪೈಸೆ ಕೊಟ್ಟು ಒಂದು ಐಸ್ ಕ್ಯಾಂಡಿ ಕೊಳ್ಳುವಷ್ಟು ಹಣ ಆಗ ಜೇಬಲ್ಲಿ ಇರುತ್ತಿರಲಿಲ್ಲ.
ಸಂಜೆ ಶಾಲೆಯ ಗಂಟೆ ಬಾರಿಸಿದಾಗ ಶಾಲೆಯ ಅಂಗಳದಲ್ಲಿ ಖಾದ್ರಿಯಕ್ಕನ ಐಸ್ ಕ್ಯಾಂಡಿಯ ಗಂಟೆ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿತ್ತು. ಹಣವಿದ್ದವರು ಕ್ಯಾಂಡಿ ಖರೀದಿಸುತ್ತಿದ್ದರು. ಹಣವಿಲ್ಲದ ಕೆಲ ವಿದ್ಯಾರ್ಥಿಗಳು ಬೇರೆ ವಿದ್ಯಾರ್ಥಿಗಳು ಕ್ಯಾಂಡಿ ತಿನ್ನುತ್ತಿರುವುದನ್ನು ದೂರದಿಂದ ನೋಡಿ ಆಸೆ ಪಡುತ್ತಿದ್ದರು. ಆಗ ಖಾದ್ರಿಯಕ್ಕ ಅವರನ್ನೂ ಕರೆದು ಸ್ವಲ್ಪ ಕರಿಗಿದ ಐಸ್ ಕ್ಯಾಂಡಿ ನೀಡಿ ಔದಾರ್ಯ ಮೆರೆದಿದ್ದರು.
ದೀಪಿಕಾ ಪ್ರೌಢಶಾಲೆಯಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ, ವಿದೇಶದಲ್ಲಿದ್ದಾರೆ, ಉದ್ಯಮಿಗಳಾಗಿದ್ದಾರೆ, ಶಾಲೆಗೆ ದೇಣಿಗೆ ನೀಡುವಷ್ಟು ಶ್ರೀಮಂತರಾಗಿದ್ದಾರೆ. ಆದರೆ ಖಾದ್ರಿಯಕ್ಕನ ಸನ್ಮಾನದ ವೇಳೆ, ಬಾಲ್ಯದಲ್ಲಿ ಒಂದು ಐಸ್ ಕ್ಯಾಂಡಿ ಖರೀದಿಸಲು ಸಾಧ್ಯವಾಗದೆ ಅವರು ಪ್ರೀತಿಯಿಂದ ಐಸ್ ಕ್ಯಾಂಡಿ ನೀಡಿದ ಆ ದಿನಗಳನ್ನು ನೆನೆಸಿಕೊಂಡಾಗ ಹಿರಿಯ ವಿದ್ಯಾರ್ಥಿಗಳ ಕಣ್ಣಾಲಿಗಳು ತೇವಗೊಂಡಿತು.
ಇನ್ನೂ ಸನ್ಮಾನದ ನಿರೀಕ್ಷೆಯನ್ನೂ ಮಾಡಿರದ ಖಾದ್ರಿಯಕ್ಕ ಶಾಲೆಯ ಹಿರಿಯ ವಿದ್ಯಾರ್ಥಿಗಳ ಪ್ರೀತಿಗೆ ಗಳಗಳನೆ ಹತ್ತು ಭಾವುಕರಾದರು, ಹಿರಿಯ ವಿದ್ಯಾರ್ಥಿಗಳು ಈ ಕ್ಷಣ ಭಾವಪರವಶರಾದರು.