ಮಂಗಳೂರು, ಜೂ 8 (Daijiworld News/MSP): ಕಡಲನಗರಿಯನ್ನು ಬೆಚ್ಚಿ ಬೀಳಿಸಿದ್ದ , ಬ್ಯಾಂಕಿಂಗ್ ಕೋಚಿಂಗ್ ಪಡೆಯಲು ಚಿಕ್ಕಮಗಳೂರಿನಿಂದ ಬಂದ ವಿದ್ಯಾರ್ಥಿನಿ ಅಂಜನಾ ವಸಿಷ್ಠ (22) ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ತನಿಖೆ ಮುಂದುವರಿಸಿದ್ದು, ಶಂಕಿತ ಆರೋಪಿಯ ಜಾಡು ಹಿಡಿದು ಹೊರಟ್ಟಿದ್ದಾರೆ. ಕೊಠಡಿಯನ್ನು ಬಾಡಿಗೆ ಪಡೆದಿದ್ದ ವಿಜಯಪುರ ಜಿಲ್ಲೆಯ ಸಂದೀಪ್ ರಾಥೋಡ್, ವಿದ್ಯಾರ್ಥಿನಿ ಅಂಜನಾಳನ್ನು ಕೊಲೆಗೈದು ಪರಾರಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಘಟನೆ ವಿವರ:
ತರಬೇತಿಗೆಂದು ಬಂದಿದ್ದ ಅಂಜನಾ ವಸಿಷ್ಠ (22) ಅತ್ತಾವರದ ಬಾಡಿಗೆ ಕೊಠಡಿಯೊಂದರಲ್ಲಿ ಕತ್ತುಹಿಸುಕಿ ಕೊಲೆ ಮಾಡಿದ ಸ್ಥಿತಿಯಲ್ಲಿ ಶುಕ್ರವಾರ ಸಂಜೆ ಪತ್ತೆಯಾಗಿದ್ದಳು. ಉಜಿರೆಯಲ್ಲಿ ಎಂಎಸ್ಸಿ ಪೂರ್ಣಗೊಳಿಸಿದ ಬಳಿಕ ಈಕೆಗೆ ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆಗಾಗಿ ತರಬೇತಿ ಪಡೆಯಲು ಗುರುವಾರ ಬೆಳಗ್ಗೆ ಚಿಕ್ಕಮಗಳೂರಿನಿಂದ ಮಂಗಳೂರಿನಿಂದ ಬಂದಿದ್ದಳು. ಅತ್ತಾವರ 6ನೇ ಕ್ರಾಸ್ನಲ್ಲಿರುವ ತನ್ನ ಸ್ನೇಹಿತ ವಿಜಯಪುರ ಮೂಲದ ಸಂದೀಪ್ ರಾಥೋಡ್ ಎಂಬವನ ಬಾಡಿಗೆ ಕೊಠಡಿಗೆ ಹೋಗಿದ್ದು, ಅಲ್ಲಿ ಮಂಚದ ಸರಳಿನೆಡೆಯಲ್ಲಿ ಈಕೆಯ ಕುತ್ತಿಗೆ ಬಿಗಿದು ವಯರ್ ಸುತ್ತಿ ಕೊಲೆ ಮಾಡಲಾಗಿತ್ತು. ಸಂಜೆ ವೇಳೆ ಕೊಲೆ ಪ್ರಕರಣ ಬಯಲಿಗೆ ಬಂದಿತ್ತು. ಆರೋಪಿ ಸಂದೀಪ್ ರಾಠೋಡ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ ಪರೀಕ್ಷೆಗೆ ತರಬೇತಿ ಪಡೆಯಲು ಮಂಗಳೂರಿಗೆ ಆಗಮಿಸಿದ್ದ. ಜೂನ್ 2ರಿಂದ ಅತ್ತಾವರ 6ನೇ ಕ್ರಾಸ್ನ ಲೂಯಿಸ್ ಪಯಾಸ್ ಎಂಬುವವರ ಬಾಡಿಗೆ ಮನೆ ಪಡೆದುಕೊಂಡು, ಅಲ್ಲಿಯೇ ವಾಸವಾಗಿದ್ದ. ಮನೆ ಬಾಡಿಗೆ ಪಡೆಯುವ ಜೂ.2ರಂದು ಬಾಡಿಗೆ ಮನೆ ಪಡೆಯಲು ಬಂದಾಗ ಅಂಜನಾ ಕೂಡಾ ಬಂದು ಹೋಗಿದ್ದಳು. ಶುಕ್ರವಾರ ಮತ್ತೆ ಬೆಳಗ್ಗೆ ಸಂದೀಪ್ ರಾಠೋಡ್ನ ಬಾಡಿಗೆ ಮನೆಗೆ ಬಂದಿದ್ದು, ಈ ವೇಳೆ ಮನೆ ಮಾಲೀಕರಲ್ಲಿ ನಾವಿಬ್ಬರು ಮದುವೆಯಾಗಿರುವುದಾಗಿ ಹೇಳಿದ್ದಲ್ಲದೆ, ಊರಿನಿಂದ ಚಪಾತಿ ತಂದಿದ್ದೇನೆ. ಕೊಡಲು ಬಂದಿರುವುದಾಗಿ ನಂಬಿಸಿ ಮನೆಯ ಮೇಲಿರುವ ಬಾಡಿಗೆ ಕೊಠಡಿಗೆ ಹೋಗಿದ್ದಳು ಎಂದು ತಿಳಿದು ಬಂದಿದೆ.
ಹಣ ಡ್ರಾ: ಅಂಜನಾ ವಸಿಷ್ಠ ಖಾತೆಯಿಂದ ಬೆಳಗ್ಗೆ 10.30ರ ವೇಳೆಗೆ 5 ಸಾವಿರ ರೂಪಾಯಿ ಹಾಗೂ 10 ಸಾವಿರ ರೂ ಸೇರಿದಂತೆ ಒಟ್ಟು 15 ಸಾವಿರ ಡ್ರಾ ಮಾಡಲಾಗಿತ್ತು. ಹಣವನ್ನು ಆಕೆಯೇ ಡ್ರಾ ಮಾಡಿದ್ದಾಳಾ ಅಥವಾ ಆರೋಪಿ ಡ್ರಾ ಮಾಡಿದ್ದಾನಾ ಎನ್ನುವುದು ತನಿಖೆಯಿಂದ ತಿಳಿದುಬರಬೇಕಿದೆ.
ಕೊಲೆಯಾದ ಅಂಜನಾ ಚಿಕ್ಕಮಗಳೂರಿನ ಮಂಜುನಾಥ್ ದಂಪತಿಯ ಏಕಮಾತ್ರ ಪುತ್ರಿಯಾಗಿದ್ದು ಈಕೆಗೆ ವಿವಾಹ ಸಂಬಂಧವೂ ಕೂಡಿಬಂದಿತ್ತು. ಹುಡುಗನನ್ನು ನೋಡಿದ ಅಂಜನಾ ತಂದೆಯ ಜತೆ ಮದುವೆ ವಿಚಾರದಲ್ಲಿ ಮುಂದುವರಿಯುವಂತೆ ಶುಕ್ರವಾರ ಬೆಳಗ್ಗೆ ಹೇಳಿದ್ದಳು.