ಕುಂದಾಪುರ, ಡಿ.19(DaijiworldNews/AA): ಕೋಡಿ ಸಮುದ್ರ ತೀರದಲ್ಲಿ ಅಂಬರ್ ಗ್ರೀಸ್ ಮಾರಾಟ ನಡೆಯುತ್ತಿದೆ ಎನ್ನುವ ಖಚಿತ ಮಾಹಿತಿ ಪಡೆದ ಮಂಗಳೂರು ವಲಯ ಅರಣ್ಯ ಸಂಚಾರಿ ದಳದ ತಂಡ ಮಾರುವೇಷದಲ್ಲಿ ಬಂದಿದ್ದ ಪರಿಣಾಮ ಸ್ಥಳೀಯರಿಂದ ಥಳಿತಕ್ಕೊಳಗಾದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.







ಕೋಡಿಯಲ್ಲಿ ಅಂಬರ್ ಗ್ರೀಸ್ ಡೀಲ್ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಮಾರುವೇಷದಲ್ಲಿ ಮೂರು ಕಾರಿನಲ್ಲಿ ಬಂದ ಅರಣ್ಯ ಇಲಾಖೆ ಸಿಐಡಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ಸ್ಥಳೀಯರು ಅಧಿಕಾರಿಗಳನ್ನು ಹಿಗ್ಗಾಮುಗ್ಗ ಹೊಡೆದು ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ. ಗಾಯಗೊಂಡವರು ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಅರಣ್ಯ ಸಂಚಾರಿ ದಳದ ಎಸೈ ಜಾನಕಿ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ದಾಳಿ ಸಂದರ್ಭ ಕುಂದಾಪುರದ ಪೊಲೀಸರಿಗೆ ಮಾಹಿತಿ ನೀಡಿಲ್ಲ ಎನ್ನಲಾಗಿದ್ದು, ದಾಳಿ ವೇಳೆಗೆ ಅರಣ್ಯ ಸಂಚಾರಿ ದಳದ ಜೊತೆಗೆ ಮಾಹಿತಿದಾರರಾಗಿ ಬಂದಿದ್ದ ಇಬ್ಬರಿಗೂ ಗಂಭೀರ ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಎಸೈ ಜಾನಕಿ ಎಂಟು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳನ್ನು ಪೊಲೀಸರು ರಾತ್ರಿ ಬಂಧಿಸುವ ಸಾಧ್ಯತೆಗಳಿವೆ. ಹೆಚ್ಚಿನ ಮಾಹಿತಿ ಇನ್ನು ಲಭ್ಯವಾಗಬೇಕಿದೆ.