ಮಂಗಳೂರು, ಡಿ.19(DaijiworldNews/AA): ಅಡುಗೆ ಮನೆಯ ಸಿಲಿಂಡರ್ನಿಂದ ಗ್ಯಾಸ್ ಸೋರಿಕೆಯಾಗಿ ಬೆಂಕಿ ಹತ್ತಿಕೊಂಡ ಪರಿಣಾಮ ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡ ಘಟನೆ ತಡಂಬೈಲ್ ವೆಂಕಟರಮಣ ಕಾಲನಿಯಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದೆ.

ಮನೆಯ ಯಜಮಾನ ವಾಮನ ಅವರ ಪತ್ನಿ ವಸಂತಿ (68) ಮತ್ತು ವಾಮನ ಅವರ ಅಕ್ಕ ಪುಷ್ಪಾ (72) ಗಾಯಾಳುಗಳು. ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಸಂತಿ ಅವರು ಗ್ಯಾಸ್ ಸೋರಿಕೆಯಾಗಿರುವುದನ್ನು ಗಮನಿಸದೆ ಮಧ್ಯಾಹ್ನ ಅಡುಗೆ ಕೋಣೆಗೆ ಹೋಗಿ ಸ್ಟವ್ಗೆ ಬೆಂಕಿ ಹಚ್ಚಿದ್ದಾರೆ. ಅನಿಲ ಸೋರಿಕೆಯಾಗಿದ್ದರಿಂದ ಬೆಂಕಿ ಏಕಾಏಕಿ ವ್ಯಾಪಿಸಿಕೊಂಡಿದೆ. ವಸಂತಿ ಅವರು ಸಹಾಯಕ್ಕಾಗಿ ಕೂಗಿದಾಗ ಹೊರಗೆ ಬಟ್ಟೆ ಒಗೆಯುತ್ತಿದ್ದ ಪುಷ್ಪಾ ಧಾವಿಸಿ ಬಂದು ಹೊರಗಿನಿಂದ ಬಾಗಿಲು ತೆರೆಯುತ್ತಿದ್ದಂತೆ ಅವರಿಗೂ ಬೆಂಕಿ ಹೊತ್ತಿಕೊಂಡಿದೆ. ಅವರಿಬ್ಬರ ಕೂಗಾಟ ಕೇಳಿ ಅಕ್ಕಪಕ್ಕದವರು ಧಾವಿಸಿ ಇಬ್ಬರನ್ನೂ ಹೊರಗೆಳೆದು ಬೆಂಕಿ ನಂದಿಸಲು ಸಹಕರಿಸಿದ್ದಾರೆ.
ವಸಂತಿ ಅವರು ಉಟ್ಟಿದ್ದ ಸೀರೆ ಅವರ ಮೈಗೆ ಅಂಟಿಕೊಂಡಿತ್ತು. ಬಳಿಕ ಸೀರೆಯನ್ನು ಕತ್ತರಿಸಿ ತೆಗೆಯಬೇಕಾಯಿತು. ಅದಾಗಲೇ ಕೈ, ಮುಖದ ಭಾಗ ಮತ್ತಿತರ ಕಡೆ ಬೆಂಕಿ ತಗುಲಿತ್ತು ಎಂದು ನೆರವಿಗೆ ಧಾವಿಸಿದವರು ಹೇಳಿದ್ದಾರೆ.
ಅಡುಗೆ ಅನಿಲ ದುರಂತದಲ್ಲಿ ಮನೆಯ ಛಾವಣಿಯ ಶೀಟ್ ಹಾರಿಹೋಗಿ ಸ್ಫೋಟದಂತಹ ಶಬ್ದ ಕೇಳಿಸಿದೆ. ಮನೆಯ ಹೊರಭಾಗಕ್ಕೂ ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿತ್ತು. ಮನೆಯ ಒಳಭಾಗ, ಹೊರಗೆ ಇದ್ದ ಚಪ್ಪಲಿ ಸ್ಟಾಂಡ್, ಬಟ್ಟೆ ಬರೆ, ಕಟ್ಟಿಗೆ, ವಿದ್ಯುತ್ ಸಂಪರ್ಕ ವ್ಯವಸ್ಥೆ, ಸಮೀಪದ ಬಾಳೆ ಗಿಡ ಇತ್ಯಾದಿಗಳೂ ಬೆಂಕಿ ಹೊತ್ತಿಕೊಂಡು ಕರಟಿ ಹೋಗಿವೆ ಎಂದು ತಿಳಿದುಬಂದಿದೆ.
ಮನೆ ಯಜಮಾನ ವಾಮನ ಅವರು ಅಯ್ಯಪ್ಪ ವ್ರತಧಾರಿ ಯಾಗಿದ್ದು, ಮನೆ ಬಳಿಯಿರುವ ಸಣ್ಣ ಅಡುಗೆ ಕೋಣೆಯಲ್ಲಿ ಪ್ರತ್ಯೇಕವಾಗಿ ಅಡುಗೆ ಮಾಡಿಕೊಳ್ಳುತ್ತಿದ್ದರು. ಕೋಣೆಯ ಒಳಗೆ ಮತ್ತೆರಡು ಅನಿಲ ಜಾಡಿಗಳಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಇಂಡೇನ್ ಗ್ಯಾಸ್ ಏಜೆನ್ಸಿಯ ಅಧಿಕಾರಿಗಳು ಆಗಮಿಸಿ ಪರಿಶೀಲಿಸಿದ್ದಾರೆ. ಗ್ಯಾಸ್ ಪೈಪ್, ರೆಗ್ಯುಲೇಟರ್, ಸಿಲಿಂಡರ್ ತಪಾಸಣೆ ನಡೆಸಿದ್ದು, ರೆಗ್ಯುಲೇಟರ್ ಸಮೀಪ ಪೈಪ್ನಿಂದ ಅನಿಲ ಸೋರಿಕೆಯಾಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಸುರತ್ಕಲ್ ಪೊಲೀಸರು ಹಾಗೂ ಫಾರೆನ್ಸಿಕ್ ತಜ್ಞರು ಕೂಡ ಪರಿಶೀಲನೆ ನಡೆಸಿದ್ದಾರೆ.